ಉದಯಪುರ(ರಾಜಸ್ಥಾನ): ಉದಯಪುರದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪಕ್ಷದ ನವ ಸಂಕಲ್ಪ್ ಚಿಂತನ್ ಶಿಬಿರದಲ್ಲಿ ಇತ್ತೀಚಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದ ಸೋಲುಗಳ ಕುರಿತು ಚಿಂತನ-ಮಂಥನ ನಡೆದಿದ್ದು, ಈ ವೇಳೆ ವಿದ್ಯುನ್ಮಾನ ಮತಯಂತ್ರಗಳ(ಇವಿಎಂ) ಸಮಸ್ಯೆ ಬಗ್ಗೆ ವಿಸ್ತೃತ ಚರ್ಚೆ ನಡೆಸಲಾಗಿದೆ.
ಮೂರು ದಿನಗಳ ಶಿಬಿರದಲ್ಲಿ ಮೊದಲ ಎರಡು ದಿನಗಳಲ್ಲಿ ಗೆಲುವಿನ ಮಾರ್ಗಗಳನ್ನು ಕಂಡುಕೊಳ್ಳುವ ಪಕ್ಷದ ಕಾರ್ಯತಂತ್ರದ ಕುರಿತು ಚರ್ಚೆಗಳು ನಡೆದವು. ವಿರೋಧ ಪಕ್ಷಗಳು ಈ ಹಿಂದೆ ಪ್ರಶ್ನಿಸಿದ್ದ ಇವಿಎಂಗಳ ಹ್ಯಾಕಿಂಗ್ ಸಾಧ್ಯತೆಯ ಕುರಿತು ಶಿಬಿರದಲ್ಲಿ ಪ್ರಸ್ತಾಪವಾಗಿ ಇದರ ಬಗ್ಗೆ ಚರ್ಚೆ ನಡೆದಿದೆ.
ಮೂರು ದಿನಗಳ ಈವೆಂಟ್‌ನ ಸುದೀರ್ಘ ಚರ್ಚೆಗಳು ನಡೆದಿದ್ದು, ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ ಶಿಬಿರದ ಮುಕ್ತಾಯದ ನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಅಧ್ಯಕ್ಷರು ರಚಿಸಿದ ಸಮಿತಿಗಳು ಸಿದ್ಧಪಡಿಸಿದ ಕರಡು ಅಂತಿಮಗೊಳ್ಳಲಿದ್ದು, ಆರು ಸಮಿತಿಗಳ ಅಧ್ಯಕ್ಷರು ಮತ್ತು 430 ಹಿರಿಯ ನಾಯಕರು ಕರಡು ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಿಡಬ್ಲ್ಯುಸಿ ಸಭೆಯಲ್ಲಿ ಆರು ಅಂಶಗಳ ಪ್ರಸ್ತಾವನೆಯ ವರದಿಯನ್ನು ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಸಲ್ಲಿಸಲಾಗಿದೆ.