ಬೆಂಗಳೂರು: ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಿಂದ ತನಿಖೆ ಪಾರದರ್ಶಕತೆ ಬಗ್ಗೆ ಅನುಮಾನ ವ್ಯಕ್ತಪಡಿಸಲಾಗಿದೆ.
ಆರೋಪಿ ಮಾಜಿ ಮಂತ್ರಿಯನ್ನು ವಿಚಾರಣೆಗೆ ಕರೆಸಿ ಹಿಂಬಾಗಿಲ ಮೂಲಕ ಪೊಲೀಸರು ಕಳುಹಿಸಿಕೊಡುತ್ತಾರೆ. ಸಂತ್ರಸ್ತೆಗೆ ವಿಶ್ರಾಂತಿ ನೀಡದೆ ಸತತ ವಿಚಾರಣೆ ನಡೆಸಿದ್ದಾರೆ. ಆರೋಪಿಯನ್ನು ಕರೆದುಕೊಂಡು ಹೋಗಿ ಮಹಜರು ಮಾಡುವ ಬದಲಿಗೆ ಸಂತ್ರಸ್ತೆಯನ್ನು ಕಾಡಿಸಿ ಮಹಜರು ನಡೆಸಲಾಗುತ್ತಿದೆ ಎಂದು ದೂರಲಾಗಿದೆ.
ಆರೋಪಿ, ಕುಟುಂಬ ವಾಸಸ್ಥಳ, ಬಳಸುತ್ತಿದ್ದ ಮೊಬೈಲ್, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುವುದು ಸಾಮಾನ್ಯ ಪ್ರಕ್ರಿಯೆ. ಆದರೆ, ಇಲ್ಲಿ ಎಲ್ಲವೂ ಉಲ್ಟಾ ಆಗಿದ್ದು ದೂರು ನೀಡಿದ ಸಂತ್ರಸ್ತೆಯನ್ನು ಆರೋಪಿ ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಆರೋಪಿ ಕುಟುಂಬದ ವಿಚಾರಣೆ ನಡೆಸುವ ಬದಲಿಗೆ ಸಂತ್ರಸ್ತೆ ಕುಟುಂಬದ ವಿಚಾರಣೆ ನಡೆಸಲಾಗಿದೆ. ಆರೋಪಿಯ ದೂರಿನಲ್ಲಿ ಸಂತ್ರಸ್ತೆಯ ಹೆಸರು ಇಲ್ಲದಿದ್ದರೂ ಯುವತಿಯೇ ಆರೋಪಿ ಎನ್ನುವಂತೆ ವಿಚಾರಣೆ ನಡೆಸಲಾಗಿದೆ. ಸಂತ್ರಸ್ತೆಯ ದೂರಿನಲ್ಲಿ ಆರೋಪಿ ಹೆಸರಿಸಿದ್ದರೂ ಸಮರ್ಪಕವಾಗಿ ವಿಚಾರಣೆ ನಡೆಸಿಲ್ಲ ಎಂದು ಹೇಳಲಾಗಿದೆ. ಆರೋಪಿಯನ್ನು ಚುನಾವಣೆ ಪ್ರಚಾರಕ್ಕೆ ಮುಖ್ಯಮಂತ್ರಿಗಳೇ ಕರೆಯುತ್ತಾರೆ. ತನಿಖೆ ನಡೆಸದೆ ಅವರದು ತಪ್ಪಿಲ್ಲ ಎಂದು ಕ್ಲೀನ್ ಚಿಟ್ ನೀಡುತ್ತಾರೆ. ನಾವೆಲ್ಲರೂ ಆರೋಪಿ ಬೆಂಬಲಕ್ಕಿದ್ದೇವೆ ಎಂದು ಸಚಿವರು ಹೇಳುವ ಮೂಲಕ ಬಿಜೆಪಿ ಸರ್ಕಾರ ಆರೋಪಿಯನ್ನು ರಕ್ಷಿಸುತ್ತಿದೆ ಎನ್ನುವುದಕ್ಕೆ ನಿದರ್ಶನವಾಗಿದೆ ಎಂದು ಹೇಳಲಾಗಿದೆ.