ಜೈಪುರ: ರಾಜಸ್ಥಾನ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೇ ಕಾಂಗ್ರೆಸ್ ಅಭ್ಯರ್ಥಿ ನಿಧನರಾಗಿದ್ದಾರೆ. ಕರಣ್ ಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗುರ್ ಮಿತ್ ಸಿಂಗ್ ಕೂನರ್(75) ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೂರು ಬಾರಿ ಶಾಸಕರಾಗಿದ್ದ ಗುರ್ ಮಿತ್ ಸಿಂಗ್ ಕೂನರ್ ಅವರನ್ನು ನ. 12ರಂದು ದೆಹಲಿಯ ಏಮ್ಸ್ ಗೆ ದಾಖಲಿಸಲಾಗಿತ್ತು. ಅಧಿಕ ರಕ್ತದೊತ್ತಡ, ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
1951 ರ ಜನ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 52ರ ಪ್ರಕಾರ ಮಾನ್ಯತೆ ಪಡೆದ ರಾಜ್ಯ ಅಥವಾ ರಾಷ್ಟ್ರೀಯ ಪಕ್ಷದಿಂದ ಸ್ಪರ್ಧಿಸಿದ್ದ ಅಭ್ಯರ್ಥಿ ಮತದಾನಕ್ಕೆ ಮೊದಲು ನಿಧನರಾದಲ್ಲಿ ಆ ಸ್ಥಾನದ ಮತದಾನವನ್ನು ಮುಂದೂಡಲಾಗುತ್ತದೆ. ಅಭ್ಯರ್ಥಿ ಮೃತಪಟ್ಟ 7 ದಿನಗಳ ಒಳಗೆ ಮತ್ತೊಬ್ಬ ಅಭ್ಯರ್ಥಿಯನ್ನು ನಾಮನಿರ್ದೇಶನ ಮಾಡುವಂತೆ ಮಾನ್ಯತೆ ಪಡೆದ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಸೂಚಿಸಲಿದೆ.
ಕರಣ್ ಪುರ ವಿಧಾನಸಭಾ ಕ್ಷೇತ್ರದ ಚುನಾವಣಾ ದಿನಾಂಕ ಮುಂದೂಡಲಿದ್ದು, ಮತದಾನದ ಹೊಸ ದಿನಾಂಕವನ್ನು ಆಯೋಗ ಪ್ರಕಟಿಸಲಿದೆ. ಗುರ್ ಮಿತ್ ಸಿಂಗ್ 1998, 2008, 2018ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು.