ಬೆಂಗಳೂರು: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಪಕ್ಷದ ವತಿಯಿಂದ ಹಮ್ಮಿಕೊಂಡಿರುವ ಭಾರತ್ ಜೋಡೋ ಯಾತ್ರೆ, ಕರ್ನಾಟಕದಲ್ಲಿ ಹಾದುಹೋಗುವ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಭಾಗವಹಿಸಲಿದ್ದಾರೆ.
ರಾಹುಲ್ ಗಾಂಧಿ ನೇತೃತ್ವದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ‘ಭಾರತ್ ಜೋಡೋ’ ಯಾತ್ರೆ ಕೈಗೊಳ್ಳಲಾಗಿದ್ದು, ಸೆ. 30 ರಂದು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಿಂದ ರಾಜ್ಯದಲ್ಲಿ ಯಾತ್ರೆ ಆರಂಭವಾಗಲಿದೆ.
ಈ ಯಾತ್ರೆಯಲ್ಲಿ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಭಾಗವಹಿಸಲಿದ್ದು, ಅವರು ಭಾಗವಹಿಸುವ ದಿನಾಂಕವನ್ನು ಶೀಘ್ರವೇ ನಿರ್ಧರಿಸಲಾಗುವುದು ಎಂದು ಕಾಂಗ್ರೆಸ್ ನಾಯಕರದ ಕೆ.ಸಿ. ವೇಣುಗೋಪಾಲ್, ರಂದೀಪ್ ಸಿಂಗ್ ಸುರ್ಜೆವಾಲಾ, ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ‘ಭಾರತ್ ಜೋಡೋ’ ಯಾತ್ರೆ ಸಾಗುವ ಮಾರ್ಗದ ಸಿದ್ಧತೆಗಳ ಪರಿಶೀಲನೆ ನಡೆಸಲಾಗಿದ್ದು, ಎಲ್ಲಾ ಪ್ರಮುಖ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ಅಕ್ಟೋಬರ್ 2 ರಂದು ಬದನವಾಳು ನಲ್ಲಿ ಗಾಂಧಿ ಜಯಂತಿ, ಬಳ್ಳಾರಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ದಸರಾ ಹಬ್ಬದ ಎರಡು ದಿನ ಯಾತ್ರೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.