ಕೊಪ್ಪಳ: ಕಾಂಗ್ರೆಸ್ ನಲ್ಲಿರುವ ಕೆಲವರು ನನ್ನನ್ನು ಸೋಲಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಎದುರಲ್ಲೇ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಮಾಧಾನ ಹೊರ ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ನಡೆದ ಪ್ರಜಾದ್ವನಿ ಸಮಾವೇಶದಲ್ಲಿ ಅವರು ಮಾತನಾಡಿ ಹೆಸರು ಹೇಳದೆ ತಮ್ಮ ವಿರೋಧಿಗಳ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶದಲ್ಲಿ ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ನನಗೆ ಅಧಿಕಾರ ಇಲ್ಲದಿದ್ದರೆ ಮನೆಯಲ್ಲಿ ಇರುತ್ತೇನೆ. ನಾನು ಯಾರಿಗೂ ಭಯಪಡುವುದಿಲ್ಲ ಮೋಸಗಾರರ ಬಗ್ಗೆ ಗಂಗಾವತಿ ಜನ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.
ಇಕ್ಬಾಲ್ ಅನ್ಸಾರಿ ಮಾತಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಆರ್. ಶ್ರೀನಾಥ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆಕ್ಷೇಪದ ನಡುವೆಯೂ ವಿರೋಧಿಗಳ ವಿರುದ್ಧ ಅನ್ಸಾರಿ ಹರಿಹಾಯ್ದರು.
ಸಮಾವೇಶದಲ್ಲಿ ಶ್ರೀನಾಥ್ ಮತ್ತು ಅನ್ಸಾರಿ ಬಣದ ನಡುವೆ ಕಿತ್ತಾಟ ನಡೆದಿದೆ. ಶ್ರೀನಾಥ್ ಭಾಷಣಕ್ಕೆ ಅನ್ಸಾರಿ ಬೆಂಬಲಿಗರು ಆಕ್ಷೇಪಿಸಿ ಮಾತನಾಡಬೇಡಿ ಎಂದು ಹೇಳಿದ್ದಾರೆ. ವೇದಿಕೆ ಮೇಲಿದ್ದುಕೊಂಡೇ ಬೆಂಬಲಿಗರಿಗೆ ಇಕ್ಬಾಲ್ ಅನ್ಸಾರಿ ಸಾಥ್ ನೀಡಿದ್ದಾರೆ. ಬಣಗಳ ನಡುವೆ ಕಿತ್ತಾಟ ಕಂಡು ಸಿಎಂ ಸಿದ್ದರಾಮಯ್ಯ ಕಂಗಾಲಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಕಾಂಗ್ರೆಸ್ ಘಟಕ ಎರಡು ಬಣಗಳಾಗಿವೆ. ಇಕ್ಬಾಲ್ ಅನ್ಸಾರಿ ಮತ್ತು ಹೆಚ್.ಆರ್. ಶ್ರೀನಾಥ್ ಬಣದ ನಡುವೆ ತಿಕ್ಕಾಟ ನಡೆದಿದೆ. ಪ್ರಜಾಧ್ವನಿ ಸಮಾವೇಶದಲ್ಲಿ ಮತ್ತೊಮ್ಮೆ ಬಣಗಳ ಬಡಿದಾಟ ಬಹಿರಂಗವಾಗಿದೆ.
ವೇದಿಕೆ ಮೇಲಿದ್ದ ಎಲ್ಲಾ ನಾಯಕರನ್ನು ಸ್ವಾಗತಿಸಿದ ಇಕ್ಬಾಲ್ ಅನ್ಸಾರಿ ತಮ್ಮ ವಿರೋಧಿ ಬಣದವರನ್ನು ಸ್ವಾಗತಿಸಲು ಹಿಂದೇಟು ಹಾಕಿದ್ದಾರೆ. ಮಧ್ಯಪ್ರವೇಶಿಸಿದ ಸಚಿವ ಶಿವರಾಜ್ ತಂಗಡಗಿ ಉಳಿದ ನಾಯಕರನ್ನು ಕೂಡ ಸ್ವಾಗತಿಸಿದ್ದಾರೆ. ತನ್ನ ಸೋಲಿಗೆ ಕಾರಣವಾಗಿರುವ ವಿರೋಧಿ ಬಣದವರ ವಿರುದ್ಧ ಅನ್ಸಾರಿ ಕೆಲ ತಿಂಗಳಿನಿಂದ ಮುನಿಸಿಕೊಂಡಿದ್ದಾರೆ. ಪ್ರಜಾಧ್ವನಿ ಸಮಾವೇಶದಲ್ಲಿ ಅನ್ಸಾರಿ ಪರ, ವಿರೋಧಿ ಬಣ್ಣದ ತಿಕ್ಕಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.