ಗುಜರಾತ್ ವಿಧಾನಸಭಾ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರ್ತಾನೆ ಇದೆ. ಆರೋಪ-ಪ್ರತ್ಯಾರೋಪಗಳ ಸುರಿಮಳೆಯಾಗುತ್ತಿದೆ. ಇದೇ ವೇಳೆ ಗುಜರಾತ್ನ 15 ಮಾಜಿ ಸಚಿವರು ಸರ್ಕಾರಿ ಬಂಗಲೆಗಳಲ್ಲಿ ವಾಸಿಸುತ್ತಿದ್ದಾರೆ. ಅವರು ನಾಮಕಾವಸ್ಥೆ ಮಾತ್ರ ಬಾಡಿಗೆ ಪಾವತಿಸುತ್ತಿದ್ದಾರೆ ಅನ್ನೊ ಆರೋಪ ಕಾಂಗ್ರೆಸ್ ಮಾಡಿದೆ.
ಗಾಂಧಿ ನಗರದ ಐಶಾರಾಮಿ ಸರ್ಕಾರಿ ಬಂಗಲೆಯಲ್ಲಿ, ಕಳೆದ ವರ್ಷ ಅಕ್ಟೋಬರ್ನಿಂದ ಕನಿಷ್ಠ 15 ಜನ ಮಾಜಿ ಗುಜರಾತ್ ಸಚಿವರು ಹೆಸರಿಗೆ ಮಾತ್ರ ಬಾಡಿಗೆ ಪಾವತಿಸಿ, ಐಶಾರಾಮಿ ಬಂಗಲೆಯನ್ನ ತಮ್ಮದೇ ಸ್ವಂತದ್ದು ಅನ್ನೋ ರೀತಿಯಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರತಿಪಕ್ಷ ಕಾಂಗ್ರೆಸ್ ಆರೋಪಿಸಿದೆ. ಆ 15 ಮಾಜಿ ಸಚಿವರು ಹಿಂದಿನ ವಿಜಯ್ ರೂಪಾನಿ ಸರ್ಕಾರದ ಸಂಪುಟದ ಸದಸ್ಯರಾಗಿದ್ದರು. ಅಲ್ಲದೆ, ಈ ಮಾಜಿ ಸಚಿವರು ಈ ಬಂಗಲೆಯಲ್ಲಿ ಹಿಂದಿನ ಶೈಕ್ಷಣಿಕ ಅಧಿವೇಶನ ಮುಗಿಯುವವರೆಗೂ ಇರಲು ಅವಕಾಶ ನೀಡುವ ವಿಶೇಷ ನಿಬಂಧನೆಯಡಿಯಲ್ಲಿ ವಾಸಿಸುತ್ತಿದ್ದಾರೆ. ಆ ಅವಧಿಯೂ ಈಗ ಮುಗಿದು ಹೋಗಿದೆ. ಆದರೂ ಅವರು ಯಾರೂ ಬಂಗಲೆಯನ್ನ ಇನ್ನೂ ಖಾಲಿ ಮಾಡಿಲ್ಲ. ಅಷ್ಟೆ ಅಲ್ಲ ಈ 15 ಮಾಜಿ ಸಚಿವರ ಕುಟುಂಬದಲ್ಲಿ, ಶಾಲೆ ಅಥವಾ ಕಾಲೇಜಿಗೆ ಹೋಗುವ ಮಕ್ಕಳೂ ಇಲ್ಲ ಅಂತ ಕಾಂಗ್ರೆಸ್ ಹೇಳಿದೆ.
ಅದೇ ಸಮಯದಲ್ಲಿ ರಾಜ್ಯದಲ್ಲಿ ಆಡಳಿತಾರೂಢ ಬಿಜೆಪಿಯು ಕಾಂಗ್ರೆಸ್ನ ಹಕ್ಕನ್ನ ತಿರಸ್ಕರಿಸಿತ್ತು. ಈ ಬಂಗಲೆಗಳನ್ನು ರಾಜ್ಯ ಸರ್ಕಾರದ ನಿಯಮಗಳ ಪ್ರಕಾರವೇ ಹಂಚಿಕೆ ಮಾಡಲಾಗಿದೆ. ಈ ಮಾಜಿ ಸಚಿವರು ಈಗ ಕೇವಲ ಶಾಸಕರಾಗಿದ್ದಾರೆ. ಮತ್ತು ಸಾಮಾನ್ಯ ಸಂದರ್ಭಗಳಲ್ಲಿ ಅವರು ಮಂಜೂರು ಮಾಡಿದ ಎಂಎಲ್ಎ ಕ್ವಾರ್ಟರ್ಸ್ಗಳಲ್ಲಿ ವಾಸಿಸಬಹುದಾಗಿದೆ. ಮತ್ತು ಸಬ್ಸಿಡಿ ದರದಲ್ಲಿ ಐಶಾರಾಮಿ ಬಂಗಲೆಗಳಲ್ಲಿ ವಾಸಿಸುವ ಹಾಗಿಲ್ಲ. ಈ ನಿಯಮವನ್ನ ಬಿಜಿಪಿಯ ಈ 15 ಸದಸ್ಯರು ರಿಯಾಯತಿ ದರದಲ್ಲಿ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಕಾಂಗ್ರೆಸ್ ವಕ್ತಾರ ಮನೀಷ್ ದೋಷಿ ಪತ್ರಿಕಾಗೋಷ್ಠಿ ನಡೆಸಿ ` ಈ ಮಾಜಿ ಮಂತ್ರಿಗಳಿಗೆ, ಈ ಬಂಗಲೆಯನ್ನ ಪ್ರತಿ ತಿಂಗಳು 4,200 ರೂಪಾಯಿಗೆ ಮಂಜೂರು ಮಾಡಲಾಗಿದೆ. ಇದೇ ಬಂಗಲೆಯ ಮಾರುಕಟ್ಟೆ ಬೆಲೆ ತಿಂಗಳಿಗೆ 42 ಸಾವಿರ ರೂಪಾಯಿ ಬಾಡಿಗೆ ಇದೆ. ಅಕ್ಟೋಬರ್ ತನಕ ಅವರಿಗೆ ಅಲ್ಲಿ ಇರುವ ಅವಕಾಶ ಕೊಡಲಾಗಿತ್ತು. ಈಗ ಆ ಅವಧಿಯ ಕಾಲವೂ ಮೀರಿಹೋಗಿದೆ. ಅವರ ಮಕ್ಕಳ ವಿದ್ಯಾಭ್ಯಾಸದ ಸಮಯವೂ ಮೀರಿದೆ, ಆದರೂ ಅವರು ಅಲ್ಲೇ ಠಿಕಾಣಿ ಹೂಡಿದ್ದಾರೆ.
ಕಾಂಗ್ರೆಸ್ ಆರೋಪ ಮಾಡಿರುವ ಪ್ರಕಾರ, `ಈ ಮಾಜಿ ಸಚಿವರ ಮಕ್ಕಳು ಶಾಲೆ ಅಥವಾ ಕಾಲೇಜುಗಳಿಗೆ ಹೋಗುತ್ತಿಲ್ಲ. ಅಷ್ಟಕ್ಕೂ ಅವರು ಶಾಲೆ ಅಥವಾ ಕಾಲೇಜುಗಳಿಗೆ ಹೋಗುತ್ತಾರೆ ಅಂತ ಅಂದುಕೊಂಡರೂ ಈಗಾಗಲೇ ಅವರ ಶೈಕ್ಷಣಿಕ ಅವಧಿ ಮುಗಿದೇ ಹೋಗಬೇಕಾಗಿತ್ತು. ಆದರೂ ಈ ಬಂಗಲೆಯಲ್ಲಿ ಇವರೆಲ್ಲ ಇನ್ನೂ ಇದ್ದಾರೆ.
ಇದೆಲ್ಲ ಹೇಳಿಕೆಗಳನ್ನ ತಳ್ಳಿಹಾಕಿರುವ ಮಾಜಿ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮಾ ಅವರು ` ಪ್ರಸ್ತುತ ಜಾರಿಯಲ್ಲಿರುವ ನಿಯಮದ ಪ್ರಕಾರ ಬಂಗಲೆಗಳನ್ನ ಹಂಚಿಕೆ ಮಾಡಲಾಗಿದೆ. ಅಕ್ಟೋಬರ್ 1,2021ರ ಆದೇಶದ ಮೂಲಕ ಅವರಿಗೆ `ಎ`ವರ್ಗದ ಬಂಗಲೆಯನ್ನ ಸಹ ಮಂಜೂರು ಮಾಡಲಾಗಿದೆ. ಅಂತ ಹೇಳಿದ್ಧಾರೆ.
ಈ ರೀತಿಯ ಐಶಾರಾಮಿ ಬಂಗಲೆಯನ್ನ ನನಗೊಬ್ಬನಿಗೆ ಮಾತ್ರ ಅಲ್ಲ ಹಲವು ಮಾಜಿ ಸಚಿವರಿಗೂ ಬಂಗಲೆಗಳನ್ನು ಮಂಜೂರು ಮಾಡಲಾಗಿತ್ತು. ಆ ಸಮಯದಲ್ಲಿ ಮಾಜಿ ಸಚಿವರಿಗೆ ಎಷ್ಟು ಬಾಡಿಗೆ ನಿಗದಿ ಮಾಡಲಾಗಿತ್ತೊ ಅಷ್ಟೆ ಬಾಡಿಗೆಯನ್ನ ಸರ್ಕಾರ ಪಡೆಯುತ್ತಿದೆ. ಕಾಂಗ್ರೆಸ್ನ ಈ ಆರೋಪ ಹಾಸ್ಯಾಸ್ಪದವಾಗಿದೆ. ಇದಕ್ಕೆ ನಾನು ಏನೂ ಉತ್ತರ ಕೊಡಲು ಬಯಸುವುದಿಲ್ಲ ಎಂದು ತಳ್ಳಿಹಾಕಿರುವ ಮಾಜಿ ಶಿಕ್ಷಣ ಸಚಿವ ಭೂಪೇಂದ್ರ ಸಿಂಗ್ ಚುಡಾಸಮಾ ಹೇಳಿದ್ದಾರೆ.
ಈ ಐಶಾರಾಮಿ ಬಂಗಲೆಗಳನ್ನು ಮಾಜಿ ಸಚಿವರು, ಅಂದಿನ ಉಪಮುಖ್ಯಮಂತ್ರಿ ನಿತಿನ್ ಪಟೇಲ್, ಗೃಹ ಖಾತೆ ನಿರ್ವಹಿಸಿದ್ದ ಪ್ರದೀಪ್ ಸಿಂಗ್ ಜಡೇಜಾ, ಇಂಧನ ಸಚಿವರಾಗಿದ್ದ ಸೌರಭ್ ಪಟೇಲ್ ಸೇರಿದಂತೆ ಇತರರಿಗೆ ಹಂಚಿಕೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈಶ್ವರ್ ಪರ್ಮಾರ್, ಪುರುಷೋತ್ತಮ್ ಸೋಲಂಕಿ, ಜಯದ್ರತ್ ಸಿಂಗ್ ಪರ್ಮಾರ್, ಈಶ್ವರಸಿನ್ಹ್ ಪಟೇಲ್, ವಾಸನ್‌ಭಾಯ್ ಅಹಿರ್, ವಿಭಾವರಿ ದವೆ, ರಾಮಲಾಲ್ ಪಾಟ್ಕರ್, ಧರ್ಮೇಂದ್ರ ಸಿಂಗ್ ಜಡೇಜಾ ಮತ್ತು ಕುನ್ವರ್ಜಿ ಬವಾಲಿಯಾ ಕೂಡ ಬಂಗಲೆಗಳನ್ನು ಮಂಜೂರು ಮಾಡಿದ ಗುಂಪಲ್ಲಿ ಸೇರಿದ್ದಾರೆ.
“ಸಾವಿರಾರು ಸರ್ಕಾರಿ ನೌಕರರು ವಸತಿ ಕ್ವಾರ್ಟರ್ಸ್ ಹಂಚಿಕೆಗಾಗಿ ವರ್ಷಗಳಿಂದ ಕಾಯುತ್ತಿರುವಾಗ ಮಾಜಿ ಮಂತ್ರಿಗಳು ಬೊಕ್ಕಸದ ಹಣದಿಂದ ಐಷಾರಾಮಿ ಬಂಗಲೆಗಳಲ್ಲಿ ವಾಸಿಸುವುದನ್ನು ಸರ್ಕಾರ ಖಚಿತಪಡಿಸಿದೆ. ಅಲ್ಲದೆ, ಕೆಲವು ‘ನಿಶ್ಚಿತ-ವೇತನ’ ಉದ್ಯೋಗಿಗಳು ತಮ್ಮ ಸಂಬಳಕ್ಕೆ ಸಮಾನವಾದ ಬಾಡಿಗೆಯನ್ನು ಪಾವತಿಸಬೇಕಾಗುತ್ತದೆ. ಇಷ್ಟೆಲ್ಲ ನಿಯಮ ಇದ್ದರೂ ಬಿಜೆಪಿ ಮಾಜಿ ಸಚಿವರಿಗೆ ಯಾಕೆ ಈ ವಿಶೇಷ ಸವಲತ್ತು ಅನ್ನೋದು ಕಾಂಗ್ರೆಸ್ನ ಪ್ರಶ್ನೆಯಾಗಿದೆ.