ಬೆಂಗಳೂರು: ಮಹಿಳೆಯರಿಗೆ ಉಚಿತವಾಗಿ ಸ್ಯಾನಿಟರಿ ಪ್ಯಾಡ್ ವಿತರಿಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ ಎಂದು ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಅಲ್ಕಾ ಲಾಂಬಾ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದತ್ತ ಮಹಿಳೆಯರು ಒಲವು ತೋರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ಸದಸ್ಯತ್ವ ಪಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ರಾಜಕೀಯದತ್ತ ಆಸಕ್ತಿ ತೋರಿಸುತ್ತಿದ್ದಾರೆ. ರಾಷ್ಟ್ರವ್ಯಾಪಿ ಮಹಿಳಾ ಕಾಂಗ್ರೆಸ್ ನಿಂದ ಸದಸ್ಯತ್ವ ಅಭಿಯಾನವನ್ನು ಸೆಪ್ಟೆಂಬರ್ ನಲ್ಲಿ ಆರಂಭಿಸಿದ್ದು, ಒಂದು ತಿಂಗಳಲ್ಲಿ 2.50 ಲಕ್ಷ ಮಹಿಳೆಯರು ಆನ್ಲೈನ್ ಮೂಲಕ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ದೇಶದಲ್ಲಿ ನಾವು ನಡೆಸಿದ ಸಮೀಕ್ಷೆಯಲ್ಲಿ ಗ್ರಾಮೀಣ ಮಹಿಳೆಯರು ಋತುಚಕ್ರದ ವೇಳೆ ಅಗತ್ಯವಿರುವ ಸ್ಯಾನಿಟರಿ ಪ್ಯಾಡ್ ಖರೀದಿಸಲು ಕಷ್ಟವಾಗುತ್ತಿದೆ. ಇದರಿಂದಾಗಿ ಅನೇಕ ಮಹಿಳೆಯರು ಕ್ಯಾನ್ಸರ್ ನಂತಹ ಕಾಯಿಲೆಗೆ ತುತ್ತಾಗುತ್ತಿದ್ದಾರೆ. ಮಹಿಳಾ ಕಾಂಗ್ರೆಸ್ ಸದಸ್ಯರಿಗೆ ಸ್ಯಾನಿಟರಿ ಪ್ಯಾಡ್ ತಯಾರಿಸುವ ಯಂತ್ರವನ್ನು ಸಿಎಸ್ಆರ್ ಫಂಡ್ ಮೂಲಕ ನೀಡಿ ಅವರಿಗೆ ಆರ್ಥಿಕವಾಗಿ ಸಬಲೀಕರಣ ಮಾಡುವ ಯೋಜನೆ ರೂಪಿಸಿದ್ದೇವೆ. ಇದರಿಂದ ಉತ್ಪಾದನೆಯಾಗುವ ಪ್ಯಾಡ್ ಗಳನ್ನು ಸರ್ಕಾರದ ನೆರವಿನಿಂದ ಹಳ್ಳಿಗಳಲ್ಲಿ ಉಚಿತವಾಗಿ ಮಹಿಳೆಯರಿಗೆ ವಿತರಿಸಲಾಗುವುದು ಎಂದು ಹೇಳಿದ್ದಾರೆ.