ನವದೆಹಲಿ: ಸದ್ಯಕ್ಕೆ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಇಲ್ಲ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೂ ಹೈಕಮಾಂಡ್ ಬ್ರೇಕ್ ಹಾಕಿದೆ.
ದೆಹಲಿಯಲ್ಲಿ ನಡೆದ ಕಾಂಗ್ರೆಸ್ ನಾಯಕರ ಸಭೆಯಲ್ಲಿ ಈ ಕುರಿತಾಗಿ ಚರ್ಚೆ ನಡೆಸಲಾಗಿದ್ದು, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಒಪ್ಪಿಲ್ಲ. ಉಪಚುನಾವಣೆ ಗೆಲುವಿನ ನಂತರ ಈ ಬಗ್ಗೆ ನಿರುತ್ಸಾಹ ತೋರಿಸಿದೆ. ಈಗ ಸ್ಥಾನ ಬದಲಾವಣೆ ಮಾಡಿದರೆ ತಪ್ಪು ಸಂದೇಶ ರವಾನೆಯಾಗುತ್ತದೆ ಎನ್ನುವ ಕಾರಣಕ್ಕೆ ಕೆಪಿಸಿಸಿ ಅಧ್ಯಕ್ಷರ ಸ್ಥಾನ ಬದಲಾವಣೆಗೆ ಹೈಕಮಾಂಡ್ ನಿರಾಸಕ್ತಿ ತೋರಿದೆ.
ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಸಚಿವ ಸಂಪುಟ ಪುನಾರಚನೆಗೂ ಹೈಕಮಾಂಡ್ ಆಸಕ್ತಿ ತೋರಿಸಿಲ್ಲ. ಈಗ ಪುನರ್ ರಚನೆ ಮಾಡಿದರೆ ಮತ್ತೊಂದಿಷ್ಟು ಸಮಸ್ಯೆ ಎದುರಾಗುತ್ತದೆ ಎನ್ನುವ ಕಾರಣಕ್ಕೆ ಹೈಕಮಾಂಡ್ ಸಂಪುಟ ಪುನಾರಚನೆಗೆ ಆಸಕ್ತಿ ತೋರಿಸಿಲ್ಲ ಎನ್ನಲಾಗಿದೆ.
ಈಗ ಬದಲಾವಣೆ ಮಾಡಿದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹಿನ್ನೆಲೆಯಲ್ಲಿ ರಾಜ್ಯ ಸಚಿವ ಸಂಪುಟ ಪುನಾರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡದೇ ಇರಲು ಚರ್ಚೆ ನಡೆಸಲಾಗಿದೆ.
ಇನ್ನು ಇದೇ ವೇಳೆ ಖಾಲಿ ಇರುವ ಸಚಿವ ಸ್ಥಾನಗಳನ್ನು ಭರ್ತಿ ಮಾಡಲು ನಿರ್ಧರಿಸಲಾಗಿದೆ. ಸದ್ಯಕ್ಕೆ ಪುನಾರಚನೆ ಇಲ್ಲವೆಂದು ಹೇಳಲಾಗಿದೆ. ಮುಖ್ಯಮಂತ್ರಿ ಬಳಿ ಇರುವ ಹೆಚ್ಚುವರಿ ಖಾತೆಗಳ ಹಂಚಿಕೆ ಬಗ್ಗೆ ಯೋಚನೆ ನಡೆದಿದೆ. ರಾಜ್ಯ ಸಚಿವ ಸಂಪುಟ ಪುನರ್ ರಚನೆಗೆ ಬ್ರೇಕ್ ಬೀಳಲಿದ್ದು ಸದ್ಯಕ್ಕೆ ವಿಸ್ತರಣೆ ಅಷ್ಟೇ ಆಗಲಿದೆ ಎನ್ನಲಾಗಿದೆ.
ಇದರಿಂದಾಗಿ ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಉಪ ಚುನಾವಣೆ ಬಳಿಕ ಸಂಪುಟ ಸೇರುವ ನಿಟ್ಟಿನಲ್ಲಿ ಕೆಲವರು ನಾಯಕರ ಮೇಲೆ ಒತ್ತಡ ಹೇರಿದ್ದರು. ಆದರೆ, ಸದ್ಯಕ್ಕೆ ಸಂಪುಟ ಪುನಾರಚನೆ, ಕೆಪಿಸಿಸಿ ಅಧಯಕ್ಷರ ಬದಲಾವಣೆ ಇಲ್ಲ. ಕೇವಲ ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಮಾತ್ರ ಚರ್ಚೆ ನಡೆದಿದೆ ಎನ್ನಲಾಗಿದೆ.