ಪಾಕಿಸ್ತಾನದ ಕ್ವೆಟ್ಟಾದಲ್ಲಿ ಕಾಂಗೋ ವೈರಸ್‌ನ ಹೊಸ ಪ್ರಕರಣ ಬೆಳಕಿಗೆ ಬಂದಿದೆ. 32 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು, ಫಾತಿಮಾ ಜಿನ್ನಾ ಆಸ್ಪತ್ರೆಯ ಪ್ರತ್ಯೇಕ ವಾರ್ಡ್‌ಗೆ ದಾಖಲಿಸಲಾಗಿದೆ. ಪಾಕಿಸ್ತಾನದಲ್ಲಿ ಈ ಹಿಂದೆ ಕಾಂಗೋ ವೈರಸ್‌ನಿಂದ ರೋಗಿಯೊಬ್ಬರು ಸಾವನ್ನಪ್ಪಿದ ಪ್ರಕರಣವೂ ಬೆಳಕಿಗೆ ಬಂದಿತ್ತು. ಅಷ್ಟಕ್ಕೂ ಪಾಕಿಸ್ತಾನದಲ್ಲಿ ಆತಂಕಕ್ಕೆ ಕಾರಣವಾಗಿರುವ ಈ ಕಾಯಿಲೆ ಯಾವುದು? ಇದರ ಲಕ್ಷಣಗಳೇನು ಎಂಬುದನ್ನೆಲ್ಲ ನೋಡೋಣ.
ಕ್ರಿಮಿಯನ್ ಕಾಂಗೊ ಹೆಮರಾಜಿಕ್ ಜ್ವರ (CCHF) ಒಂದು ರೀತಿಯ ವೈರಲ್ ಫೀವರ್. ಸಾಮಾನ್ಯವಾಗಿ ಕೀಟಗಳ ಮೂಲಕ ಹರಡುತ್ತದೆ. ಕೀಟವನ್ನು ಸಾಯಿಸಿದಾಗ ವೈರಸ್ ನಮ್ಮ ರಕ್ತಪ್ರವಾಹಕ್ಕೆ ಪ್ರವೇಶಿಸುತ್ತದೆ. ಸಂಪರ್ಕದ ಮೂಲಕವೂ ಇದು ಹರಡಬಹುದು. ಈ ವೈರಸ್ ಸಾಂಕ್ರಾಮಿಕವಾಗಿರುವುದರಿಂದ ಬಹಳ ಅಪಾಯಕಾರಿ. ಈ ಕಾಯಿಲೆಯಿಂದ ಸಂಭವಿಸುವ ಮರಣ ಪ್ರಮಾಣವು 10 – 40 ಪ್ರತಿಶತದಷ್ಟಿದೆ.
ಕಾಂಗೋ ವೈರಸ್ ಆಫ್ರಿಕಾ, ಬಾಲ್ಕನ್ಸ್, ಮಧ್ಯಪ್ರಾಚ್ಯ ಮತ್ತು ಏಷ್ಯಾದಾದ್ಯಂತ ಸ್ಥಳೀಯ ರೋಗವಾಗಿದೆ. ಇದನ್ನು ಮೊದಲು ಕ್ರಿಮಿಯನ್ ಪರ್ಯಾಯ ದ್ವೀಪದಲ್ಲಿ 1944 ರಲ್ಲಿ ಕಂಡುಹಿಡಿಯಲಾಯಿತು. ಆಗ ಇದಕ್ಕೆ ಕ್ರಿಮಿಯನ್ ಹೆಮರಾಜಿಕ್ ಜ್ವರ ಎಂದು ಹೆಸರಿಸಲಾಯಿತು. ನಂತರ ಇದಕ್ಕೆ ಕಾಂಗೋ ಎಂಬ ಹೆಸರು ಬಂದಿದೆ.
ಕಾಂಗೋ ಜ್ವರದ ಲಕ್ಷಣಗಳು
ಕಾಂಗೋ ವೈರಸ್ ಸೋಂಕಿನಿಂದ ಹಠಾತ್ ಜ್ವರ ಕಾಣಿಸಿಕೊಳ್ಳುತ್ತದೆ. ಸ್ನಾಯು ನೋವು, ತಲೆತಿರುಗುವಿಕೆ, ಕುತ್ತಿಗೆ ನೋವು, ಬೆನ್ನು ನೋವು, ತಲೆನೋವು, ಕಣ್ಣು ನೋವು ಮತ್ತು ಫೋಟೊಫೋಬಿಯಾ ಕೂಡ ಉಂಟಾಗಬಹುದು.
ಸೋಂಕು ತಗುಲಿದ ಆರಂಭದಲ್ಲಿ ವಾಕರಿಕೆ, ವಾಂತಿ, ಅತಿಸಾರ, ಹೊಟ್ಟೆ ನೋವು ಮತ್ತು ಗಂಟಲು ನೋವು ಸಂಭವಿಸಬಹುದು. ನಂತರ ಹಠಾತ್ ಮನಸ್ಥಿತಿ ಬದಲಾವಣೆಗಳು ಮತ್ತು ಗೊಂದಲ ಉಂಟಾಗುತ್ತದೆ. ಮೂರ್ನಾಲ್ಕು ದಿನಗಳ ನಂತರ ಚಡಪಡಿಕೆ, ನಿದ್ರಾಹೀನತೆ, ಖಿನ್ನತೆ ಮತ್ತು ಸೋಮಾರಿತನ ಕಾಡಲಾರಂಭಿಸುತ್ತದೆ. ತೀವ್ರ ಅನಾರೋಗ್ಯಕ್ಕೀಡಾದಲ್ಲಿ ಮೂತ್ರಪಿಂಡದ ಕ್ಷೀಣತೆ, ಹಠಾತ್ ಯಕೃತ್ತಿನ ವೈಫಲ್ಯ ಕೂಡ ಉಂಟಾಗುತ್ತದೆ.
ಈ ರೋಗಕ್ಕೆ ಯಾವುದೇ ಲಸಿಕೆ ಲಭ್ಯವಿಲ್ಲ. ಹಾಗಾಗಿ ಸೋಂಕನ್ನು ಕಡಿಮೆ ಮಾಡುವ ಏಕೈಕ ಮಾರ್ಗವೆಂದರೆ ಅಪಾಯಕಾರಿ ಅಂಶಗಳ ಬಗ್ಗೆ ಜಾಗೃತಿ ಮೂಡಿಸುವುದು. ವೈರಸ್ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆಯಿಂದಿರಬೇಕು.