ಕಾಂಗ್ರೆಸ್ ಪಕ್ಷ ನಡೆಸಿದ್ದ 85 ನೇ ಸರ್ವಸದಸ್ಯ ಅಧಿವೇಶನದ ಜಾಹೀರಾತಿನಲ್ಲಿ ಭಾರತದ ಮೊದಲ ಶಿಕ್ಷಣ ಸಚಿವ ಮತ್ತು ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋ ಕೈಬಿಡಲಾಗಿತ್ತು. ಇದಕ್ಕಾಗಿ ಎಲ್ಲೆಡೆ ಪಕ್ಷವು ಭಾರಿ ಟೀಕೆಗೆ ಒಳಗಾಗಿದೆ.
ಕಾಂಗ್ರೆಸ್ ನಡೆಗೆ ಆಕ್ರೋಶ ವ್ಯಕ್ತವಾಗುತ್ತಲೇ ಕಾಂಗ್ರೆಸ್ ಕ್ಷಮೆಯಾಚಿಸಿದೆ. ತಮ್ಮಿಂದ ತಪ್ಪಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಕ್ಷ ಹೇಳಿದೆ.
ಕಳೆದ ಶನಿವಾರದಂದು ಪೂರ್ಣಪುಟದ ಜಾಹೀರಾತು ನೀಡಲಾಗಿತ್ತು. ಅಧಿವೇಶನದ ಮೂರನೇ ದಿನ ದಿನಪತ್ರಿಕೆಗಳಲ್ಲಿ ಇದು ಪ್ರಕಟವಾಗಿತ್ತು. ಇದರಲ್ಲಿ ಹಿಂದಿನ ಕಾಂಗ್ರೆಸ್ ನಾಯಕರಾದ ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಸರ್ದಾರ್ ವಲ್ಲಭಭಾಯಿ ಪಟೇಲ್, ಬಿ ಆರ್ ಅಂಬೇಡ್ಕರ್, ಸುಭಾಷ್ ಚಂದ್ರ ಬೋಸ್, ಲಾಲ್ ಬಹದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ , ರಾಜೀವ್ ಗಾಂಧಿ, ಪಿವಿ ನರಸಿಂಹ ರಾವ್ ಮತ್ತು ಸರೋಜಿನಿ ನಾಯ್ಡು ಮುಂತಾದವರ ಫೋಟೋ ಇದ್ದವು.
ಆದರೆ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಅವರ ಫೋಟೋ ಕೈಬಿಟ್ಟಿರುವುದಕ್ಕೆ ಹಲವರು ಕಿಡಿ ಕಾರಿದ್ದರು. ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ತು.