ಮೈಸೂರು: ಪಕ್ಷದಲ್ಲಿನ ಗೊಂದಲಗಳಿಂದ ಸರ್ಕಾರಕ್ಕೆ ಹಾನಿಯಾಗುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ, ಅಧಿಕಾರ ಹಂಚಿಕೆ, ಸಚಿವ ಸಂಪುಟ ಪುನಾರಚನೆ ವಿಚಾರದಲ್ಲಿ ಗೊಂದಲಗಳಿರುವುದು ನಿಜ. ಪಕ್ಷದ ಹೈಕಮಾಂಡ್ ಆದಷ್ಟು ಬೇಗನೆ ಇಂತಹ ಗೊಂದಲ ನಿವಾರಿಸಬೇಕಿದೆ ಎಂದು ಹೇಳಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಈ ವಿಚಾರದಲ್ಲಿ ನೇರವಾಗಿ ಹೇಳಿಕೆ ನೀಡಿದ್ದು, ಅದಕ್ಕೆ ನನ್ನ ಸಮ್ಮತಿ ಇದೆ. ಕೆಪಿಸಿಸಿ ಅಧ್ಯಕ್ಷರನ್ನು ನೇಮಕ ಮಾಡುವುದು ಹೈಕಮಾಂಡ್ ನಿರ್ಧಾರಕ್ಕೆ ಬಿಟ್ಟ ವಿಚಾರವಾಗಿದೆ. ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ, ಜವಾಬ್ದಾರಿ ನಿಭಾಯಿಸುವ ಶಕ್ತಿ ನನಗಿಲ್ಲ. ಪಕ್ಷದಿಂದ ಸರ್ಕಾರವೇ ಹೊರತು ಸರ್ಕಾರದಿಂದ ಪಕ್ಷವಲ್ಲ. ಪಕ್ಷದಲ್ಲಿನ ಗೊಂದಲ ನಿವಾರಿಸುವಂತೆ ಸಭೆಯಲ್ಲಿ ಹೈಕಮಾಂಡ್ ನಾಯಕರಿಗೆ ಹೇಳಿದ್ದೇವೆ. ಶೀಘ್ರವೇ ಗೊಂದಲ ನಿವಾರಣೆಯಾಗಲಿದೆ ಎಂದು ಹೇಳಿದ್ದಾರೆ.