
ಶಾಲಾ ವಿದ್ಯಾರ್ಥಿಗಳು ಮೊಬೈಲ್ ತರುತ್ತಿರಬಹುದು ಎಂಬ ಅನುಮಾನದ ಮೇರೆಗೆ ಅವರುಗಳ ಬ್ಯಾಗ್ ಪರಿಶೀಲಿಸಿದ ಶಿಕ್ಷಕರು ಅದರಲ್ಲಿ ಕಂಡು ಬಂದ ವಸ್ತುಗಳನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಹೈಸ್ಕೂಲ್ ವಿದ್ಯಾರ್ಥಿಗಳ ಬ್ಯಾಡ್ನಲ್ಲಿ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಸಿಗರೇಟ್, ಲೈಟರ್ ಮೊದಲಾದವು ಪತ್ತೆಯಾಗಿವೆ.
ಇಂಥದೊಂದು ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ವಿದ್ಯಾರ್ಥಿಗಳು ಮೊಬೈಲ್ ತರುತ್ತಿರುವುದರಿಂದ ಶಿಕ್ಷಣದಲ್ಲಿ ಕುಂಠಿತವಾಗಬಹುದು ಎಂಬ ಕಾರಣಕ್ಕೆ ಕರ್ನಾಟಕ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟದ ನಿರ್ದೇಶನದ ಮೂಲಕ ಮೇರೆಗೆ ಶಿಕ್ಷಕರುಗಳು ತಮ್ಮ-ತಮ್ಮ ಶಾಲೆಗಳಲ್ಲಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲಿಸಿದ್ದರು.
8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಬ್ಯಾಗ್ ಪರಿಶೀಲಿಸಿದ ವೇಳೆ ಕಾಂಡೋಮ್, ಗರ್ಭ ನಿರೋಧಕ ಮಾತ್ರೆ, ಸಿಗರೇಟ್, ಲೈಟರ್, ಅಮಲು ಬರಿಸುವ ವೈಟ್ನರ್ ಪತ್ತೆಯಾಗಿವೆ. ಅಷ್ಟೇ ಅಲ್ಲ ವಿದ್ಯಾರ್ಥಿ ಒಬ್ಬ ವಾಟರ್ ಬಾಟಲಿನಲ್ಲಿ ಮದ್ಯ ತುಂಬಿಸಿಕೊಂಡು ಬಂದಿರುವುದು ಸಹ ಕಂಡುಬಂದಿದೆ.
ಇದರಿಂದ ಶಿಕ್ಷಕರು ಹಾಗೂ ಪೋಷಕರು ಆಘಾತಕ್ಕೊಳಗಾಗಿದ್ದು, ಹೀಗಾಗಿ ತಮ್ಮ ತಮ್ಮ ಮಕ್ಕಳ ಮೇಲೆ ಪೋಷಕರು ನಿಗಾ ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಅಲ್ಲದೆ ಶಾಲೆಗಳಲ್ಲಿ ಶಿಕ್ಷಕರು ಸಹ ವಿದ್ಯಾರ್ಥಿಗಳ ಬ್ಯಾಗುಗಳನ್ನು ಕಾಲಕಾಲಕ್ಕೆ ಪರಿಶೀಲಿಸುವುದು ಅಗತ್ಯ ಎಂದು ಹೇಳಲಾಗಿದೆ.