ಬೆಂಗಳೂರು: ರಾಜ್ಯ ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆ ಹೊಂದಲು ಡಿಸೆಂಬರ್ 31, 2022 ರ ವರೆಗೆ ಕಾಲಾವಧಿ ವಿಸ್ತರಿಸಲಾಗಿದೆ.
ವಾರ್ಷಿಕ ವೇತನ ಬಡ್ತಿ, ಪದನ್ನೋತಿ ಮತ್ತು ಇತರೆ ಸೌಲಭ್ಯ ಪಡೆದುಕೊಳ್ಳಲು ಮಾರ್ಚ್ 22 ರೊಳಗೆ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಆಗಿರಬೇಕೆಂದು ಆದೇಶಿಸಲಾಗಿತ್ತು. ಕೊರೋನಾ ಸೇರಿದಂತೆ ಅನೇಕ ಕಾರಣಗಳಿಂದಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಪಾಸ್ ಹೊಂದುವ ಕಾಲಾವಧಿಯನ್ನು ಈ ವರ್ಷದ ಡಿಸೆಂಬರ್ 31 ರವರೆಗೆ ವಿಸ್ತರಿಸಲಾಗಿದೆ.
ಪರೀಕ್ಷೆ ನಡೆಸಬೇಕಿದ್ದ ಕಿಯೋನಿಕ್ಸ್ ಸಂಸ್ಥೆ ತಾಂತ್ರಿಕ ಕಾರಣಗಳಿಂದ ಸರಿಯಾಗಿ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಕೊರೊನಾ ಸೋಂಕು ನಿರ್ವಹಣೆ ಕರ್ತವ್ಯದಲ್ಲಿ ನೌಕರರು ಭಾಗಿಯಾಗಿದ್ದು, ಇದರಿಂದ ಶೇಕಡ 30 ರಷ್ಟು ಸಿಬ್ಬಂದಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಹಾಜರಾಗಿಲ್ಲ. ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸಾಗದ ಹಿನ್ನೆಲೆಯಲ್ಲಿ ಜನವರಿ ಮತ್ತು ಜುಲೈನಲ್ಲಿ ಪಡೆಯಬೇಕಿದ್ದ ವೇತನ ಬಡ್ತಿಗೆ ತೊಂದರೆಯಾಗುತ್ತದೆ. ಇವೇ ಮೊದಲಾದ ಕಾರಣಗಳಿಂದಾಗಿ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೇರ್ಗಡೆ ಕಾಲಾವಧಿಯನ್ನು ಮುಂದೂಡಲಾಗಿದೆ.