ಬೆಂಗಳೂರು: ಸರ್ಕಾರಿ ನೌಕರರಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕಡ್ಡಾಯವಾಗಿದ್ದು, ಸರ್ಕಾರ ಮತ್ತೊಂದು ವರ್ಷ ರಿಲೀಫ್ ನೀಡಿದೆ.
ಸರ್ಕಾರಿ ಅಧಿಕಾರಿಗಳು, ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೆರ್ಗಡೆಯಾಗುವುದು ಕಡ್ಡಾಯವಾಗಿದೆ. ಈ ಅವಧಿಯನ್ನು ಒಂದು ವರ್ಷ ವಿಸ್ತರಣೆ ಮಾಡಬೇಕೆಂದು ಸರ್ಕಾರಿ ನೌಕರರ ಸಂಘದಿಂದ ಮನವಿ ಮಾಡಲಾಗಿತ್ತು. ಈ ಅವಧಿಯನ್ನು 2023 ರ ಡಿಸೆಂಬರ್ 31ರವರೆಗೆ ವಿಸ್ತರಿಸುವ ಪ್ರಸ್ತಾವನೆಗೆ ಮುಖ್ಯಮಂತ್ರಿಗಳು ಸಹಿ ಹಾಕಿದ್ದು, ಶೀಘ್ರವೇ ಆದೇಶ ಹೊರ ಬೀಳುವ ಸಾಧ್ಯತೆ ಇದೆ.
ಸರ್ಕಾರಿ ನೌಕರರಿಗೆ ಕಡ್ಡಾಯವಾಗಿರುವ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಪಾಸ್ ಮಾಡಿಕೊಳ್ಳಲು 2022ರ ಡಿಸೆಂಬರ್ 31ರ ವರೆಗೆ ಅವಕಾಶ ನೀಡಲಾಗಿತ್ತು. ಇಷ್ಟರಲ್ಲಿ ಉತ್ತೀರ್ಣರಾಗದ ಅಧಿಕಾರಿಗಳು ನೌಕರರ ಮುಂಬಡ್ತಿ, ವಾರ್ಷಿಕ ವೇತನ ಬಡ್ತಿ ಸೇರಿದಂತೆ ಸರ್ಕಾರಿ ಸೌಲಭ್ಯ ಸಿಗುವುದಿಲ್ಲ ಎಂದು ಹೇಳಲಾಗಿತ್ತು.
2.55 ಲಕ್ಷ ನೌಕರರು 2021ರ ಅಂತ್ಯದವರೆಗೆ ಪರೀಕ್ಷೆ ಬರೆದು ಅವರಲ್ಲಿ 1.65 ಲಕ್ಷ ನೌಕರರು ಪಾಸ್ ಆಗಿದ್ದಾರೆ. 3 ಲಕ್ಷ ನೌಕರರು ಪರೀಕ್ಷೆ ತೆಗೆದುಕೊಳ್ಳಬೇಕಿದೆ. ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಅನೇಕ ನಿಗಮ ಮಂಡಳಿಗಳ ನೌಕರರಲ್ಲಿ ಹಲವಾರು ನೌಕರರು ಹಲವು ಬಾರಿ ಪರೀಕ್ಷೆಗೆ ಹಾಜರಾಗಿದ್ದರೂ, ಪಾಸ್ ಆಗಿರಲಿಲ್ಲ. ಹೀಗಾಗಿ ಅವಧಿ ವಿಸ್ತರಿಸಲು ಮನವಿ ಮಾಡಲಾಗಿತ್ತು. ಇದಕ್ಕೆ ಸಿಎಂ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.