ಇಂದಿನ ಯುಗದಲ್ಲಿ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ನಮ್ಮ ಜೀವನಶೈಲಿಯೂ ಸಾಕಷ್ಟು ಬದಲಾಗಿದೆ. ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಫೋನ್‌ಗಳಲ್ಲೇ ನಾವು ಹೆಚ್ಚು ಹೆಚ್ಚು ಸಮಯವನ್ನು ಕಳೆಯಲು ಪ್ರಾರಂಭಿಸಿದ್ದೇವೆ. ಕಚೇರಿ ಕೆಲಸ, ಮನರಂಜನೆ ನೆಪದಲ್ಲಿ ಗಂಟೆಗಟ್ಟಲೆ ಮೊಬೈಲ್ ಹಾಗೂ ಕಂಪ್ಯೂಟರ್ ಸ್ಕ್ರೀನ್ ಮುಂದೆ ಕೂರುತ್ತೇವೆ.
ಆದರೆ ಈ ಸ್ಕ್ರೀನ್ ಟೈಮಿಂಗ್ ನಮ್ಮ ಮುಖ ಮತ್ತು ಚರ್ಮಕ್ಕೆ ಎಷ್ಟು ಹಾನಿ ಮಾಡುತ್ತದೆ ಎಂಬುದರ ಅರಿವು ಯಾರಿಗೂ ಇಲ್ಲ. ಸ್ಕ್ರೀನ್ ಟೈಮ್ ನಮ್ಮ ಮುಖದ ಅಂದವನ್ನೇ ಹಾಳುಮಾಡುತ್ತದೆ ಎಂಬುದು ಅನೇಕ ಸಂಶೋಧನೆಗಳು ಮತ್ತು ಅಧ್ಯಯನಗಳಲ್ಲಿ ಬಹಿರಂಗವಾಗಿದೆ.
ಮೊಬೈಲ್ ಲೈಟ್ ಅಪಾಯಕಾರಿ
ಮೊಬೈಲ್ ಫೋನ್‌ನ ಅತಿಯಾದ ಬಳಕೆ ನಮ್ಮ ಚರ್ಮ ಮತ್ತು ಆರೋಗ್ಯಕ್ಕೆ ತುಂಬಾ ಹಾನಿಕಾರಕ. ಮೊಬೈಲ್ ಫೋನ್ ಅಥವಾ ಲ್ಯಾಪ್‌ಟಾಪ್‌ಗಳಿಂದ ಹೊರಸೂಸುವ ನೀಲಿ ಬೆಳಕಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಸೂರ್ಯನ ಹಾನಿಕಾರಕ ಯುವಿ ಕಿರಣಗಳಂತೆಯೇ ಮೊಬೈಲ್‌ನ ನೀಲಿ ಬೆಳಕು ಕೂಡ ದುಷ್ಪರಿಣಾಮವನ್ನು ಉಂಟುಮಾಡುತ್ತದೆ.
ಇದರಿಂದಾಗಿ ಚರ್ಮದ ಮೇಲೆ ಹೈಪರ್ ಪಿಗ್ಮೆಂಟೇಶನ್, ಸುಕ್ಕುಗಳು, ಮೊಡವೆ ಮತ್ತು ಕಪ್ಪು ಚುಕ್ಕೆಗಳಂತಹ ಸಮಸ್ಯೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅಷ್ಟೇ ಅಲ್ಲ ಮೊಬೈಲ್‌ನಲ್ಲಿ ಹೆಚ್ಚು ಹೊತ್ತು ಮಾತನಾಡಿದರೆ ಮುಖಕ್ಕೆ ಬಿಸಿಯ ಅನುಭವವಾಗುವುದು ಕೂಡ ತ್ವಚೆಗೆ ಹಾನಿಕಾರಕ.
ಹೈಪರ್ ಪಿಗ್ಮೆಂಟೇಶನ್ ಸಮಸ್ಯೆ
ನೀಲಿ ಬೆಳಕಿನಿಂದ ಹೊರಹೊಮ್ಮುವ ಕಿರಣಗಳು ಚರ್ಮದ ಕೋಶಗಳನ್ನು ಹಾನಿಗೊಳಿಸುತ್ತವೆ. ಈ ಕಿರಣಗಳ ಪ್ರಭಾವದಿಂದಾಗಿ ಚರ್ಮದ ಮೇಲೆ ಹೈಪರ್ ಪಿಗ್ಮೆಂಟೇಶನ್ ಸಂಭವಿಸಲು ಪ್ರಾರಂಭಿಸುತ್ತದೆ. ಇದರಿಂದಾಗಿ ಚರ್ಮದ ಬಣ್ಣವು ಗಾಢವಾಗುತ್ತದೆ. ಇದಲ್ಲದೆ ಮುಖದ ಮೇಲೆ ಕಪ್ಪು ಮತ್ತು ಕಂದು ಕಲೆಗಳು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಕ್ರಮೇಣ ಈ ಕಲೆಗಳು ಚರ್ಮದ ವಿವಿಧ ಭಾಗಗಳಲ್ಲಿ ಹರಡುತ್ತವೆ.
ಮುಖದ ಮೇಲೆ ಸುಕ್ಕು
ಮೊಬೈಲ್ ಫೋನ್‌ನ ಅತಿಯಾದ ಬಳಕೆ ಕಣ್ಣುಗಳು ಮತ್ತು ಮುಖದ ಚರ್ಮಕ್ಕೆ ಹೆಚ್ಚಿನ ಹಾನಿಯನ್ನುಂಟುಮಾಡುತ್ತದೆ. ಮೊಬೈಲ್‌ನಲ್ಲಿ ಮೆಸೇಜ್‌ಗಳನ್ನು ನಿರಂತರವಾಗಿ ಓದುವುದರಿಂದ ಕಣ್ಣುಗಳಿಗೆ ಆಯಾಸವಾಗುತ್ತದೆ ಮತ್ತು ಅವು ಒತ್ತಡಕ್ಕೆ ಒಳಗಾಗುತ್ತವೆ. ಕಣ್ಣುಗಳ ಸುತ್ತಲೂ ಕಪ್ಪು ವರ್ತುಲ ಮತ್ತು ಸುಕ್ಕುಗಳು ಕ್ರಮೇಣ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ.
ಹಣೆಯ ಮೇಲೆ ಅಕಾಲಿಕ ಗೆರೆಗಳು ಮೂಡುತ್ತವೆ. ವಯಸ್ಸಾಗುವ ಮೊದಲೇ ವೃದ್ದಾಪ್ಯ ಬಂದುಬಿಡುತ್ತದೆ. ಇದಲ್ಲದೆ ಮೊಬೈಲ್‌ನ ನೀಲಿ ಬೆಳಕು ಕಾಲಜನ್ ಅನ್ನು ಒಡೆಯುತ್ತದೆ. ಪರಿಣಾಮ ಚರ್ಮವು ಮಂದ ಮತ್ತು ಒರಟಾಗಲು ಪ್ರಾರಂಭಿಸುತ್ತದೆ.
ಈ ಸಮಸ್ಯೆಗಳಿಗೆ ಪರಿಹಾರವೆಂದರೆ ಮೊಬೈಲ್ ಬಳಕೆಯನ್ನು ಕಡಿಮೆ ಮಾಡಬೇಕು. ಮೊಬೈಲ್‌ನಿಂದ ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳಬೇಕು. ಫೋನ್, ಚರ್ಮದ ನೇರ ಸಂಪರ್ಕಕ್ಕೆ ಬರದಂತೆ ಹ್ಯಾಂಡ್ಸ್-ಫ್ರೀ ಆಯ್ಕೆಯನ್ನು ಬಳಸಬೇಕು. ಅಲ್ಲದೆ ಪ್ರತಿದಿನ ಫೋನ್ ಅನ್ನು ಸ್ವಚ್ಛಗೊಳಿಸಿರಿ. ಎಂಟಿಸೆಪ್ಟಿಕ್‌ನಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ.
ಇದಲ್ಲದೇ ಮನೆಯಲ್ಲಿಯೂ ಸನ್‌ಸ್ಕ್ರೀನ್ ಅನ್ನು ಬಳಸುವುದು ಸೂಕ್ತ. ಇದು ಫೋನ್‌ನಿಂದ ಹೊರಹೊಮ್ಮುವ ಹಾನಿಕಾರಕ ಬೆಳಕಿನಿಂದ ರಕ್ಷಿಸುತ್ತದೆ. ಈ ಮುನ್ನೆಚ್ಚರಿಕೆಗಳನ್ನು ಅನುಸರಿಸುವ ಮೂಲಕ ನಾವು ತ್ವಚೆಯ ಮೇಲೆ ಮೊಬೈಲ್‌ನಿಂದ ಉಂಟಾಗುವ ಕೆಟ್ಟ ಪರಿಣಾಮಗಳನ್ನು ತಪ್ಪಿಸಬಹುದು.