ಬೆಂಗಳೂರು : ಸರ್ಕಾರದ ಅಧಿಕೃತ ಸಭೆ, ಸಮಾರಂಭಗಳು ಹಾಗೂ ಸರಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ಗಳ ಬಳಕೆಯನ್ನು ಸಂಪೂರ್ಣ ನಿಷೇಧಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿದ್ದು, ಸರ್ಕಾರದ ಆದೇಶದಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಆಯೋಜಿಸುವ ಸಭೆ-ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲಿನ (Single use packaged water bottles) ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಷೇಧಿಸಿ ಆದೇಶಲಾಗಿತ್ತು. ಇಂತಹ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ, ರೀತಿಯಲ್ಲಿ ಗ್ಲಾಸ್, ಸ್ಟೀಲ್ (ಪ್ಲಾಸ್ಟಿಕ್ ಅಲ್ಲದ) ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮವಹಿಸತಕ್ಕದೆಂದು ಹಾಗೂ ಆದೇಶಕ್ಕೆ ಲಗತ್ತಾದ ಅನುಬಂಧ-1ರಲ್ಲಿರುವಂತೆ ಸೂಕ್ತ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು (Common drinking water dispensing system) ಏರ್ಪಡಿಸತಕ್ಕದೆಂದು ಸೂಚಿಸಲಾಗಿತ್ತು(ಸದರಿ ಆದೇಶ ಮತ್ತು ಅದಕ್ಕೆ ಲಗತ್ತಾದ ಅನುಬಂಧ 1ನ್ನು ಲಗತ್ತಿಸಿದೆ).
ಇತ್ತೀಚಿನ ದಿನಗಳಲ್ಲಿ ಸರ್ಕಾರದ ವತಿಯಿಂದ ಅಥವಾ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಆಯೋಜಿಸುವ ಸಭೆ-ಸಮಾರಂಭಗಳಲ್ಲಿ ಮೇಲಿನ ಉಲ್ಲೇಖಿತ ಸರ್ಕಾರದ ಆದೇಶದ ಸೂಚನೆಯನ್ನು ಪಾಲಿಸುತ್ತಿಲ್ಲ ಎಂಬುದನ್ನು ಗಮನಿಸಲಾಗಿದ್ದು ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಪ್ಲಾಸ್ಟಿಕ್ ಬಾಟಲಿಗಳಲ್ಲಿ ವಿತರಿಸುತ್ತಿರುವುದು ಸಮರ್ಥನೀಯವಲ್ಲ.
ಈ ಹಿನ್ನೆಲೆಯಲ್ಲಿ ಉಲ್ಲೇಖಿತ ಸರ್ಕಾರದ ಆದೇಶದಲ್ಲಿ ನೀಡಲಾಗಿದ್ದ ಸೂಚನೆಗಳನ್ನು ಪುನರುಚ್ಚರಿಸುತ್ತ ಇನ್ನುಮುಂದೆ ಎಲ್ಲಾ ಸಭೆ-ಸಮಾರಂಭಗಳಲ್ಲಿ ಏಕ ಕಾಲಿಕ ಬಳಕೆಯ ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರಿನ ಬಳಕೆ/ಸರಬರಾಜು ಮಾಡುವುದನ್ನು ನಿಲ್ಲಿಸತಕ್ಕದ್ದು ಹಾಗೂ ಸದರಿ ಆದೇಶದ ಅನುಬಂಧ-1ರಲ್ಲಿ ನಿಗಧಿಪಡಿಸಿದಂತೆ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಕಲ್ಪಿಸಿಕೊಳ್ಳುವಂತೆ ಸೂಚಿಸಿದ್ದಾರೆ.