ಮಂಗಳೂರು: ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಹುದ್ದೆ ಕೊಡಿಸುವುದಾಗಿ ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಬ್ಬರಿಂದ 17.5 ಲಕ್ಷ ರೂಪಾಯಿ ಪಡೆದು ವಂಚನೆ ಮಾಡಿದ ಆರೋಪದ ಮೇಲೆ ರಾಮಸೇನೆ ಮುಖಂಡ ಪ್ರಸಾದ್ ಅತ್ತಾವರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಗಳೂರು ವಿವಿ ಕಾಲೇಜು ಅಭಿವೃದ್ಧಿ ಸಮಿತಿ ನಿರ್ದೇಶಕ ಡಾ. ಜೈಶಂಕರ್ ಅವರಿಗೆ ವಿವೇಕ್ ಆಚಾರ್ಯ ಅವರ ಮೂಲಕ ಪರಿಚಯವಾಗಿದ್ದ ಪ್ರಸಾದ್ ಅತ್ತಾವರ ಸಿಎಂ ಜೊತೆಗೆ ಬಾಂಧವ್ಯ ಹೊಂದಿರುವುದಾಗಿ ಹೇಳಿಕೊಂಡು 30 ಲಕ್ಷ ರೂಪಾಯಿ ನೀಡಿದರೆ ವಿವಿ ಕುಲಪತಿ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದಾರೆ.
ಅಲ್ಲದೆ, ಗಣ್ಯರೊಂದಿಗೆ ಗುರುತಿಸಿಕೊಂಡ ಫೋಟೋಗಳನ್ನು ತೋರಿಸಿ ನಂಬಿಕೆ ಬರುವಂತೆ ಮಾಡಿದ್ದು 17.5 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಉಳಿದ ಹಣಕ್ಕೆ 3 ಖಾಲಿ ಚೆಕ್ ಗಳನ್ನು ಕೂಡ ಪಡೆದುಕೊಂಡಿದ್ದಾರೆ. ಆದರೆ ಯಾವುದೇ ಹುದ್ದೆ ಕೊಡಿಸಿದೆ ಮೋಸ ಮಾಡಿರುವುದು ಗೊತ್ತಾಗುತ್ತಿದ್ದಂತೆ ಹಣ ವಾಪಸ್ ಕೇಳಿದಾಗ ಜೀವ ಬೆದರಿಕೆ ಹಾಕಲಾಗಿದೆ ಎಂದು ಹೇಳಲಾಗಿದ್ದು, ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.