ಧಾರವಾಡ: ಕರ್ನಾಟಕ ಸರ್ಕಾರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಇ-ಆಡಳಿತ ಕೇಂದ್ರದ ಮೂಲಕ ನಾಗರಿಕರ ಕುಂದು ಕೊರತೆಗಳನ್ನು ದಾಖಲಿಸಲು ಸಮಗ್ರ ವೇದಿಕೆಯೊಂದನ್ನು ರಚಿಸಿದೆ.
1902 ಸಂಖ್ಯೆಗೆ ನೇರವಾಗಿ ಕರೆಮಾಡಿ ಏಕೀಕೃತ ಸಾರ್ವಜನಿಕ ಕುಂದುಕೊರತೆ ನಿವಾರಣಾ ವ್ಯವಸ್ಥೆಯನ್ನು ಸಂಪರ್ಕಿಸಬಹುದು ಅಥವಾ https://ipgrs.karnataka.gov.in ವೆಬ್ ಪೋರ್ಟಲ್ ಮತ್ತು ಮೊಬೈಲ್ ಆ್ಯಪ್ ಮೂಲಕವು ಜನತೆ ತಮ್ಮ ಕುಂದುಕೊರತೆಯನ್ನು ನಿವಾರಿಸಿಕೊಳ್ಳಲು ಸರ್ಕಾರವನ್ನು ಸಂಪರ್ಕಿಸಬಹುದು.
ಜನಸ್ಪಂದನ ವೈಶಿಷ್ಟ್ಯಗಳು:
ಸರ್ಕಾರದ ಯಾವುದೇ ಸೇವೆ ಅಥವಾ ಯೋಜನೆಯನ್ನು ಪಡೆಯುವಲ್ಲಿ ಯಾವುದೇ ವಿಳಂಬ, ನಿರಾಕರಣೆ, ತೊಂದರೆ ಉಂಟಾದಲ್ಲಿ ದೂರು ದಾಖಲಿಸಬಹುದು. ವೆಬ್ ಪೋರ್ಟಲ್, ಮೊಬೈಲ್ ಆ್ಯಪ್ ಸಹಾಯವಾಣಿ 1902 ಮತ್ತು ಬಾಪೂಜಿ ಸೇವಾ ಕೇಂದ್ರಗಳ ಮುಖಾಂತರ ಕುಂದುಕೊರತೆ, ದೂರು ದಾಖಲಿಸಲು ಅವಕಾಶವಿದೆ. ದೂರು ದಾಖಲಾದ ಕೂಡಲೇ ನಾಗರಿಕರಿಗೆ ಸ್ವೀಕೃತಿ ಸಂದೇಶ ರವಾನೆ ಆಗುತ್ತದೆ. ಸಂಬಂಧಪಟ್ಟ ಇಲಾಖೆಯ ಕ್ಷೇತ್ರ ಅನುಷ್ಠಾನಾಧಿಕಾರಿಗೆ ನಿವಾರಣೆ ಕ್ರಮವಹಿಸಲು ಕುಂದು ಕೊರತೆ ಅರ್ಜಿಯ ರವಾನಿಸಲಾಗುತ್ತದೆ. ನಿಗದಿತ ಅವಧಿಯಲ್ಲಿ ಕುಂದು ಕೊರತೆ ನಿವಾರಣೆಗೆ ಕ್ರಮವಹಿಸಲಾಗುತ್ತದೆ. ಕಾಲಾವಧಿ ಮೀರಿದರೆ, ಸ್ವಯಂಚಾಲಿತವಾಗಿ ಮೇಲಾಧಿಕಾರಿಗೆ ಕುಂದುಕೊರತೆಯ ವರ್ಗಾವಣೆ ಆಗುವುದು. ಕುಂದುಕೊರತೆ ನಿವಾರಣೆ ತೃಪ್ತಿಕರವಾಗಿರುವ ಕುರಿತು ನಾಗರಿಕರ ಅಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆ ಈ ಜನಸ್ಪಂದನದಲ್ಲಿದೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದು.