ಬೆಂಗಳೂರಿನ ನ್ಯಾಯಾಲಯದ ಮಹಿಳಾ ಸಿಬ್ಬಂದಿಗೆ ಪ್ರಥಮ ದರ್ಜೆ ಸಹಾಯಕ ಲೈಂಗಿಕ ಕಿರುಕುಳ ನೀಡಿದ ಆರೋಪ ಕೇಳಿಬಂದಿದ್ದು, ಬಸವನಗುಡಿ ಮಹಿಳಾ ಠಾಣೆಗೆ ದೂರು ನೀಡಲಾಗಿದೆ.
ಪತಿ ಹಾಗೂ ಪುತ್ರಿಯನ್ನು ಕಳೆದುಕೊಂಡಿದ್ದ ಮಹಿಳೆ ಮಾನಸಿಕವಾಗಿ ಕುಗ್ಗಿ ಹೋಗಿದ್ದ ಬಗ್ಗೆ ಆರೋಪಿತನ ಬಳಿ ತನ್ನ ಕಷ್ಟ ಹೇಳಿಕೊಂಡಿದ್ದಾರೆ. ಮಹಿಳೆಗೆ ಹಣಕಾಸಿನ ಸಂಕಷ್ಟ ಇರುವುದನ್ನು ಅರಿತ ಆರೋಪಿ ಹಣಕಾಸು ನೆರವು ನೀಡುವುದಾಗಿ ಸಲುಗೆ ಬೆಳೆಸಿಕೊಳ್ಳಲು ಪ್ರಯತ್ನಿಸಿ ಅಶ್ಲೀಲವಾಗಿ ಮಾತನಾಡುತ್ತಿದ್ದ. ಇದರಿಂದ ನೊಂದ ಮಹಿಳೆ ಆತನೊಂದಿಗೆ ಮಾತನಾಡುವುದನ್ನು ಬಿಟ್ಟಿದ್ದಾರೆ.
ಸಿಟ್ಟಾದ ಆರೋಪಿ ತಾನು ಹೇಳಿದಂತೆ ಕೇಳದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ, ಚೆಕ್ ಬೌನ್ಸ್ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದು, ನೊಂದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.