
ಬೆಂಗಳೂರು: ಶಾಸಕ ರಮೇಶ ಜಾರಕಿಹೊಳಿ ಅವರ ಸಿಡಿ ಪ್ರಕರಣ ರಾಜ್ಯದಲ್ಲಿ ಹಲ್ಚಲ್ ಸೃಷ್ಟಿಸಿರುವ ಸಂದರ್ಭದಲ್ಲೇ ಮತ್ತೊಂದು ಬೆಳವಣಿಗೆ ನಡೆದಿದೆ.
ಸಿಡಿ ಪ್ರಕರಣದಲ್ಲಿ ಭಾರೀ ಮೊತ್ತದ ಹಣದ ವಹಿವಾಟು ನಡೆದಿದೆ ಎಂಬ ಹೇಳಿಕೆಗಳ ಹಿನ್ನೆಲೆಯಲ್ಲಿ ರಮೇಶ ಜಾರಕಿಹೊಳಿ ಅವರ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ಕಾಂಗ್ರೆಸ್ ನಿಂದ ದೂರು ನೀಡಲಾಗಿದೆ.
ಎಸ್ಐಟಿ ಪ್ರಕರಣದ ತನಿಖೆ ಮುಂದುವರೆಸಿದೆ. ಸದನದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮುಂದುವರೆಸಿದೆ. ಇಂದು ಬೆಂಗಳೂರು ಸೆಂಟ್ರಲ್ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಪದಾಧಿಕಾರಿಗಳು ಜಾರಿ ನಿರ್ದೇಶನಾಲಯಕ್ಕೆ ರಮೇಶ ಜಾರಕಿಹೊಳಿ ವಿರುದ್ಧ ದೂರು ನೀಡಿದ್ದಾರೆ.
ಸಿಡಿ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಸುಮಾರು 5 ರಿಂದ 20 ಕೋಟಿ ರೂಪಾಯಿ, 100 ಕೋಟಿ ರೂಪಾಯಿವರೆಗೂ ಹಣದ ವಹಿವಾಟು ನಡೆದಿದೆ. ಯುವತಿಗೆ ಎರಡು ಫ್ಲಾಟ್ ಕೊಡಿಸಲಾಗಿದೆ. ಭಾರಿ ಮೊತ್ತದ ಹಣ ನೀಡಲಾಗಿದೆ ಎಂದು ರಮೇಶ ಜಾರಕಿಹೊಳಿ ಹೇಳಿದ್ದರೆನ್ನಲಾಗಿದ್ದು, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅನ್ವಯ ಕ್ರಮಕೈಗೊಳ್ಳುವಂತೆ ಒತ್ತಾಯಿಸಿ ದೂರು ನೀಡಲಾಗಿದೆ.