ಬೆಂಗಳೂರು : ನವೆಂಬರ್ 4 ರ ಇಂದು ಮತ್ತು ನವೆಂಬರ್ 5 ರ ನಾಳೆ ಗ್ರೂಪ್-ಸಿ ಹುದ್ದೆಗಳಿಗೆ ಕೆ.ಪಿ.ಎಸ್.ಸಿ (ಕರ್ನಾಟಕ ಲೋಕಸೇವಾ ಆಯೋಗ) ವತಿಯಿಂದ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ.
ಗ್ರೂಪ್-ಸಿ ಹುದ್ದೆಗಳ ಭರ್ತಿಗಾಗಿ ನೇಮಕಾತಿ ಪರೀಕ್ಷೆ ನ. 04 ರಂದು ಮಧ್ಯಾಹ್ನ 02 ರಿಂದ 04 ಗಂಟೆಯವರೆಗೆ ಕನ್ನಡ ಭಾಷಾ ಪರೀಕ್ಷೆ. ನ. 05 ರಂದು ಬೆಳಿಗ್ಗೆ 10 ರಿಂದ 11.30 ರವರೆಗೆ ಸಾಮಾನ್ಯ ಜ್ಞಾನ ಪರೀಕ್ಷೆ, ಹಾಗೂ ಇದೇ ದಿನ ಮಧ್ಯಾಹ್ನ 02 ರಿಂದ 04 ಗಂಟೆಯವರೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲೀಷ್, ಕಂಪ್ಯೂಟರ್ ಜ್ಞಾನ ವಿಷಯಗಳ ಪರೀಕ್ಷೆ ನಡೆಯಲಿದೆ.
ಪರೀಕ್ಷಾ ಅಕ್ರಮ ಎಸಗುವುದನ್ನು ತಡೆಗಟ್ಟಲು ಕೆ.ಪಿ.ಎಸ್.ಸಿ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೊಠಡಿಗಳಲ್ಲಿ ಪ್ರತಿಯೊಬ್ಬರ ಮೇಲೆ ನಿಗಾ ವಹಿಸಲು ಕೊಠಡಿ ಮೇಲ್ವಿಚಾರಕರಿಗೆ ಬಾಡಿಕ್ಯಾಮರಾ ಧರಿಸುವ ವ್ಯವಸ್ಥೆ ಮಾಡಿದೆ. ಪರಿಕ್ಷಾ ಕೇಂದ್ರ ಮೇಲ್ವಿಚಾರಕರು ಜಾಮರ್, ಸಿಸಿಟಿವಿ ಹಾಗೂ ಕ್ಯಾಮರಾಗಳು ಸುಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂಬುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಯಾವುದೇ ತಾಂತ್ರಿಕ ತೊಂದರೆಗಳು ಕಂಡುಬಂದಲ್ಲಿ ಕೆ.ಪಿ.ಎಸ್.ಸಿ ಅಧಿಕಾರಿಗಳಿಗೆ ತಿಳಿಸಬೇಕು. ಯಾವುದೇ ಅಕ್ರಮಗಳು ಜರುಗದಂತೆ ಎಚ್ಚರಿಕೆ ವಹಿಸಲಾಗಿದೆ.
ಮೊಬೈಲ್, ಬ್ಲೂಟೂತ್ ಇತರೆ ಉಪಕರಣಗಳನ್ನು ಬಳಸಿ ಪರೀಕ್ಷಾ ಅಕ್ರಮ ಮಾಡುವುದನ್ನು ತಡೆಯಲು ಪರೀಕ್ಷಾ ಕೇಂದ್ರದ ಕೊಠಡಿಗಳಲ್ಲಿ ಮೊಬೈಲ್ ಜಾಮರ್ ಹಾಗೂ ಸಿ.ಸಿ.ಟಿ.ವಿ ಅಳವಡಿಸಲಾಗುವುದು.
ಪರೀಕ್ಷಾ ಕೇಂದ್ರ ಸುತ್ತ 200 ಮೀ. ವ್ಯಾಪ್ತಿಯಲ್ಲಿ ಕಲಂ. 144 ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುಂಚೆ ಸೂಕ್ತವಾಗಿ ತಪಾಸಣೆ ನಡೆಸಬೇಕು. ಪ್ರತಿ ಪರೀಕ್ಷಾ ಕೇಂದ್ರದಲ್ಲೂ ಹೆಲ್ತ್ ಸ್ಕ್ರೀನಿಂಗ್ ಕೌಂಟರ್ ತೆರದು ಆರೋಗ್ಯ ಸಹಾಯಕರನ್ನು ನೇಮಿಸಬೇಕು. ಖಜಾನೆ ಅಧಿಕಾರಿ, ಮಾರ್ಗಾಧಿಕಾರಿಗಳು, ಪರೀಕ್ಷಾ ಕೇಂದ್ರ ಮುಖ್ಯಸ್ಥರು ಹಾಗೂ ಕೊಠಡಿ ಮೇಲ್ವಿಚಾರಕರು ಪ್ರಶ್ನೆ ಪತ್ರಿಕೆ ಹಾಗೂ ಓಎಂಆರ್ ನಿರ್ವಹಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.