ಬೆಂಗಳೂರು: ಅನುಕಂಪ ಆಧಾರದ ಮೇಲೆ ಉದ್ಯೋಗ ಪಡೆಯುವುದು ಹಕ್ಕಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಒಂದೇ ಸಂಸ್ಥೆಯಲ್ಲಿ ಅನುಕಂಪದ ಉದ್ಯೋಗವಿಲ್ಲ ಎಂದು ಆದೇಶ ನೀಡಿದೆ.
ಕುಟುಂಬದ ಸದಸ್ಯರು ಈಗಾಗಲೇ ಸರ್ಕಾರದ ಅಧೀನ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆ ಕುಟುಂಬದ ಮತ್ತೊಬ್ಬ ಸದಸ್ಯನಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ತಿಳಿಸಿದೆ.
ಅನುಕಂಪದ ಉದ್ಯೋಗ ನೀಡಲು ನಿರಾಕರಿಸಿದ ಕೆಪಿಟಿಸಿಎಲ್ ಕ್ರಮ ಪ್ರಶ್ನಿಸಿ ಬೆಂಗಳೂರಿನ ಉಲ್ಲಾಳ ನಿವಾಸಿ ರಂಗನಾಥ್ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ನ್ಯಾಯಮೂರ್ತಿ ಅಲೋಕ್ ಆರಾಧ ನೇತೃತ್ವದ ವಿಭಾಗಿಯ ಪೀಠದಿಂದ ಈ ಆದೇಶ ನೀಡಲಾಗಿದೆ.
ಮೇಲ್ಮನವಿದಾರರ ಸಹೋದರ ಈಗಾಗಲೇ ಕೆಪಿಟಿಸಿಎಲ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದೇ ಸಂಸ್ಥೆಯಲ್ಲಿ ಮೇಲ್ಮನವಿದಾರರಿಗೆ ಅನುಕಂಪ ಆಧಾರದಲ್ಲಿ ಮತ್ತೊಂದು ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ಹೇಳಿದೆ.
ಕೆಪಿಟಿಸಿಎಲ್ ನಲ್ಲಿ ಕೆಲಸ ಮಾಡುತ್ತಿದ್ದ ರಂಗನಾಥ್ ಅವರ ತಂದೆ ರಾಮಯ್ಯ 2002 ರ ಅಕ್ಟೋಬರ್ 7 ರಿಂದ ನಾಪತ್ತೆಯಾಗಿದ್ದರು. ಅನುಕಂಪದ ಆಧಾರದಲ್ಲಿ ಕೆಲಸ ನೀಡುವಂತೆ ರಂಗನಾಥ್ ಅವರ ತಾಯಿ ಕೆಪಿಟಿಸಿಎಲ್ ಗೆ ಅರ್ಜಿ ಸಲ್ಲಿಸಿದ್ದು, ಅದನ್ನು ತಿರಸ್ಕರಿಸಲಾಗಿತ್ತು.
ನಂತರ ತಂದೆ ನಾಪತ್ತೆ ಕಾರಣ ನೀಡಿ ಸಿವಿಲ್ ದಾವೆ ಹೂಡಿದ ರಂಗನಾಥ್ ಅವರು ತಂದೆ ಹೆಸರಲ್ಲಿ ಮರಣ ಪ್ರಮಾಣ ಪತ್ರ ವಿತರಿಸುವಂತೆ ಬಿಬಿಎಂಪಿಗೆ ಆದೇಶಿಸಲು ಮನವಿ ಮಾಡಿದ್ದರು. ಸಿವಿಲ್ ನ್ಯಾಯಾಲಯ ಮನವಿಯನ್ನು ಪುರಸ್ಕರಿಸಿ ಸೂಚನೆ ನೀಡಿದ ಮೇರೆಗೆ ಬಿಬಿಎಂಪಿ ವತಿಯಿಂದ 2011ರಲ್ಲಿ ಮರಣ ಪ್ರಮಾಣ ಪತ್ರ ನೀಡಲಾಗಿತ್ತು.
2012ರಲ್ಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ರಂಗನಾಥ್ ಕೆಪಿಟಿಸಿಎಲ್ ಗೆ ಅನುಕಂಪದ ನೌಕರಿ ನೀಡಲು ಸೂಚಿಸುವಂತೆ ಮನವಿ ಮಾಡಿದ್ದರು. ರಂಗನಾಥ್ ಅವರ ಮನವಿಯನ್ನು ಕಾನೂನು ಪ್ರಕಾರ ಪರಿಗಣಿಸಲು ಕೆಪಿಟಿಸಿಎಲ್ ಗೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಅವರ ಅರ್ಜಿಯನ್ನು ಪರಿಶೀಲಿಸಿದ ಕೆಪಿಟಿಸಿಎಲ್ ರಂಗನಾಥ್ ಅವರ ಸಹೋದರ ಇದೇ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾರೆ. ಹಾಗಾಗಿ, ಅದೇ ಕುಟುಂಬದ ಮತ್ತೊಬ್ಬರಿಗೆ ಉದ್ಯೋಗ ಕಲ್ಪಿಸಲು ಆಗುವುದಿಲ್ಲ ಎಂದು 2013ರಲ್ಲಿ ಹೇಳಿತ್ತು. ರಂಗನಾಥ್ ಸಲ್ಲಿಸಿದ್ದ ಅರ್ಜಿಯನ್ನು 2014ರಲ್ಲಿ ಹೈಕೋರ್ಟ್ ತಿರಸ್ಕರಿಸಿದ್ದು, ಇದರ ವಿರುದ್ಧ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.
ಹೈಕೋರ್ಟ್ ವಿಭಾಗಿಯ ಪೀಠ ರಂಗನಾಥ್ ಅವರ ಮೇಲ್ಮನವಿ ವಜಾಗೊಳಿಸಿದೆ. ಅನುಕಂಪದ ಆಧಾರದ ಮೇಲೆ ಉದ್ಯೋಗ ಪಡೆಯುವುದು ಹಕ್ಕಲ್ಲ. ಕುಟುಂಬದ ಸದಸ್ಯರು ಈಗಾಗಲೇ ಸರ್ಕಾರದ ಅಧೀನ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಲ್ಲಿ ಆ ಕುಟುಂಬದ ಮತ್ತೊಬ್ಬ ಸದಸ್ಯರಿಗೆ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲಾಗದು ಎಂದು ಹೇಳಿದೆ.