ಹೆಂಡತಿಯನ್ನು ಇತರ ಮಹಿಳೆಯರೊಂದಿಗೆ ಹೋಲಿಸುವುದು ಮತ್ತು ತನ್ನ ಸಂಗಾತಿಯಲ್ಲ ಎಂದು ಅವಳನ್ನು ನಿರಂತರವಾಗಿ ನಿಂದಿಸುವುದು
ಮಾನಸಿಕ ಕ್ರೌರ್ಯಕ್ಕೆ ಸಮಾನ ಎಂದು ಕೇರಳ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ವ್ಯಕ್ತಿಯೊಬ್ಬ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಹೈಕೋರ್ಟ್ ಅಭಿಪ್ರಾಯ ನೀಡಿದೆ.
ಈ ಮುನ್ನ ಕೌಟುಂಬಿಕ ನ್ಯಾಯಾಲಯವು ದಂಪತಿಯ ವಿವಾಹವನ್ನು ಕೊನೆಗೊಳಿಸಿತ್ತು. ಜನವರಿ 2009ರಲ್ಲಿ ವಿವಾಹವನ್ನು ಶಾಸ್ತ್ರೋಕ್ತವಾಗಿ ನೆರವೇರಿತ್ತು, ಅದೇ ವರ್ಷದ ನವೆಂಬರ್ನಲ್ಲಿ ಡೈವೋರ್ಸ್ ಗೆ ಅರ್ಜಿ ಸಲ್ಲಿಕೆಯಾಗಿತ್ತು. 13 ವರ್ಷ ಬೇರೆಯಾಗಿಯೇ ಇದ್ದರು.
ತನ್ನ ಮದುವೆ ಅನೂರ್ಜಿತಗೊಳಿಸಿದ ಕೌಟುಂಬಿಕ ನ್ಯಾಯಾಲಯದ ಆದೇಶದ ವಿರುದ್ಧ ಪತಿ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸಂದರ್ಭದಲ್ಲಿ ಹೈ ಕೋರ್ಟ್ ಈ ಅಂಶವನ್ನು ಪ್ರಸ್ತಾಪಿಸಿದೆ.
ವಿವಾಹದ ಮೂಲ ಅಗತ್ಯ ಪೂರೈಸದ ಕಾರಣ ಕೌಟುಂಬಿಕ ನ್ಯಾಯಾಲಯ ಮದುವೆಯನ್ನು ಅನೂರ್ಜಿತಗೊಳಿಸಿತ್ತು. ಆದರೆ, ಹೈಕೋರ್ಟ್ನಲ್ಲಿ ನ್ಯಾಯಾಧೀಶರಾದ ಅನಿಲ್ ಕೆ.ನರೇಂದ್ರನ್ ಮತ್ತು ಸಿ.ಎಸ್.ಸುಧಾ ಅವರ ಪೀಠವು, ವಿಚ್ಛೇದನ ಕಾಯ್ದೆಯಡಿ ಪತಿಯಿಂದ ಪತ್ನಿಗಾದ ಮಾನಸಿಕ ಕ್ರೌರ್ಯದ ಕಾರಣದಿಂದ ವಿವಾಹವನ್ನು ಅನೂರ್ಜಿತಗೊಳಿಸಲಾಗಿದೆ ಎಂದು ಕೌಟುಂಬಿಕ ನ್ಯಾಯಾಲಯದ ತೀರ್ಪನ್ನು ಮಾರ್ಪಡಿಸಿದೆ.
ಹೆಂಡತಿಯು ತಾನು ಬಯಸಿದಂತೆ ಇಲ್ಲ ಪತಿ ಪುನರಾವತಿರ್ತವಾಗಿ ಅಪಹಾಸ್ಯ ಮಾಡಿದ್ದನು. ಇತರ ಮಹಿಳೆಯರೊಂದಿಗೆ ಹೋಲಿಕೆ ಮಾಡಿದ್ದ. ಪತಿಯು ಉದ್ದೇಶಪೂರ್ವಕವಾಗಿ ವೈಯಕ್ತಿಕ ಇಮೇಲ್ ಐಡಿಯಿಂದ ಆಕೆಯ ಕಚೇರಿ ಇಮೇಲ್ ಐಡಿಗೆ ಜೀವನ ಸಂಗಾತಿಯ ಬಗ್ಗೆ ತನ್ನ ನಿರೀಕ್ಷೆಗಳನ್ನು ವ್ಯಕ್ತಪಡಿಸಿದ್ದು, ಆಕೆ ಹೇಗೆ ನಡೆದುಕೊಳ್ಳಬೇಕೆಂದು ಸೂಚನೆ ನೀಡಿದ್ದನ್ನೂ ಸೇರಿದಂತೆ ಪತ್ನಿ, ಆಕೆಯ ತಾಯಿಯ ಮನವಿ, ಸಾಕ್ಷಿಗಳನ್ನು ಆಧರಿಸಿ ಕೋರ್ಟ್ ಈ ತೀರ್ಮಾನಕ್ಕೆ ಬಂದಿದೆ.
ಆರ್ಜಿದಾರನು ತನ್ನ ಹೆಂಡತಿಯಲ್ಲಿ ಆಕರ್ಷಣೆ ಹೊಂದಿಲ್ಲದೇ ಇದ್ದುದರಿಂದ ಆಕೆಯೊಂದಿಗೆ ಯಾವುದೇ ದೈಹಿಕ ಸಂಬಂಧ ಇಟ್ಟುಕೊಂಡಿಲ್ಲ ಎಂಬುದು ಆತ ಮಾಡಿದ ಆರೋಪದಿಂದ ಸಾಬೀತಾಗುತ್ತದೆ. ದಂಪತಿ ಕಡಿಮೆ ಅವಧಿ ಜೊತೆಯಾಗಿ ಇದ್ದುದರಿಂದ ಇದನ್ನು ದಿನ ನಿತ್ಯದ ಜಗಳದ ಭಾಗ ಎಂದು ಪರಿಗಣಿಸಲಾಗುವುದಿಲ್ಲ. ವಿವಾಹದ ಮೂಲ ಅಗತ್ಯವನ್ನೇ ಪೂರೈಸಿಲ್ಲ ಎಂದು ಕಂಡುಬರುತ್ತದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿತು.