ಕಚೇರಿ ಮ್ಯಾನೇಜರ್ ನ ಅನುಮತಿಯಿಲ್ಲದೇ ಸಿಬ್ಬಂದಿ ಹೊರ ಹೋಗದಂತೆ ಕಚೇರಿ ಬಾಗಿಲಿಗೆ ಬೀಗ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಆಕ್ರೋಶ ಹುಟ್ಟುಹಾಕಿದೆ.
ಎಡ್ ಟೆಕ್ ಉದ್ಯಮಿ ರವಿ ಹಾಂಡಾ ಅವರು ಟ್ವಿಟರ್‌ನಲ್ಲಿ ಈ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ. ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ಕಂಪನಿಯ ಬಾಗಿಲಿಗೆ ಬೀಗ ಹಾಕುತ್ತಿರುವ ವಾಚ್ ಮ್ಯಾನ್ ನೊಂದಿಗೆ ಸಂಭಾಷಣೆ ನಡೆಸಿದ್ದು ಏನು ನಡೆಯುತ್ತಿದೆ ಎಂದು ಕೇಳಿದ್ದಾರೆ.
ತನ್ನ ಒಪ್ಪಿಗೆಯಿಲ್ಲದೆ ಸಿಬ್ಬಂದಿ ಕೆಲಸದ ಸ್ಥಳದಿಂದ ತೆರಳದಂತೆ ತಡೆಯಲು ಮ್ಯಾನೇಜರ್ ಹೇಳಿದ್ದಾರೆಂದು ವಿಡಿಯೊದಲ್ಲಿ ವಾಚ್‌ಮ್ಯಾನ್ ಹೇಳಿದ್ದಾರೆ. ಕೋಡಿಂಗ್ ನಿಂಜಾಸ್ ಕಂಪನಿಯಲ್ಲಿ ಈ ರೀತಿ ಘಟನೆ ನಡೆದಿದೆ. ವ್ಯಾಪಕವಾಗಿ ಹಂಚಿಕೊಂಡಿರುವ ವೀಡಿಯೊ ಆನ್‌ಲೈನ್‌ನಲ್ಲಿ ಬಹಳಷ್ಟು ಜನರನ್ನು ಕೆರಳಿಸಿದೆ.
“ಭಾರತೀಯ ಎಡ್ಟೆಕ್ ಸಂಸ್ಥಾಪಕರು ಈಗ ಅಕ್ಷರಶಃ ತಮ್ಮ ಉದ್ಯೋಗಿಗಳನ್ನು ಲಾಕ್ ಮಾಡುತ್ತಿದ್ದಾರೆ. ಇಂತದ್ದನ್ನು ಈ ದೇಶದಿಂದ ಹೊರಹಾಕಿ. ಬೇರೆಲ್ಲಿಯೂ ಯಾರೂ ಈ ರೀತಿಯದ್ದನ್ನು ಎಳೆಯಲು ಧೈರ್ಯ ಮಾಡುವುದಿಲ್ಲ”ಎಂದು ವೀಡಿಯೊವನ್ನು ಹಂಚಿಕೊಳ್ಳುವಾಗ ಹಾಂಡಾ ಬರೆದಿದ್ದಾರೆ.
ವಿಡಿಯೋಗೆ ಭಾರೀ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕಂಪನಿ ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿದೆ. ಅದನ್ನೂ ರವಿ ಹಾಂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಉದ್ಯೋಗಿಯೊಬ್ಬರು ಕೆಲಸದ ಸ್ಥಳದಲ್ಲಿ ಮಾಡಿದ ವಿಷಾದನೀಯ ನಡವಳಿಕೆಯಿಂದ ಇಂತಹ ಪರಿಸ್ಥಿತಿ ಉಂಟಾಯಿತು. ಉದ್ಯೋಗಿ ತನ್ನ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿದ ನಂತರ ಪರಿಸ್ಥಿತಿಯನ್ನು ತ್ವರಿತವಾಗಿ ಸರಿಪಡಿಸಲಾಯಿತು ಎಂದಿದೆ. ಕಂಪನಿಯ ಮ್ಯಾನೇಜರ್ ಸಹ ಘಟನೆ ಬಗ್ಗೆ ಕ್ಷಮೆಯಾಚಿಸಿದ್ದು ವಿಷಾದ ವ್ಯಕ್ತಪಡಿಸಿದ್ದಾರೆ.