ಚೆನ್ನೈ: ನೌಕರರು ಉತ್ತಮವಾಗಿ ಕೆಲಸ ಮಾಡಿದರೆ ಕೆಲ ಕಂಪನಿಗಳು ಭಾರಿ ಉಡುಗೊರೆ, ಗಿಫ್ಟ್ ಗಳನ್ನು ನೀಡುವ ಮೂಲಕ ಇನ್ನಷ್ಟು ಪ್ರೋತ್ಸಾಹವನ್ನು ನೀಡುತ್ತವೆ. ಇಲ್ಲೊಂದು ಕಂಪನಿ ತನ್ನ ನೌಕರರಿಗೆ ಕಾರು ಹಾಗೂ ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದೆ.
ಹಲವು ಕಂಪನಿಗಳು ನೌಕರರಿಗೆ ವಾರ್ಷಿಕವಾಗಿ ಉಡುಗೊರೆ ನೀಡುವ ಮೂಲಕ ನೌಕರರ ಶ್ರಮಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಕಂಪನಿಗಳ ಉತ್ಪಾದಕತೆ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಹೊಸ ಉಪಾಯಗಳನ್ನು ಮಾಡುತ್ತವೆ. ಅದೇ ರೀತಿ ಚೆನ್ನೈನ ಸ್ಟ್ರಕ್ಚರಲ್ ಸ್ಟೀಲ್ ಡಿಸೈನ್ ಕಂಪನಿ ಟೀಮ್ ಡಿಟೈಲಿಂಗ್ ಸಲ್ಯೂಷನ್ಸ್, ಉತ್ತಮ ಸೇವೆ ಸಲ್ಲಿಸಿದ ತನ್ನ ನೌಕರರಿಗೆ 28 ಕಾರುಗಳು ಹಾಗೂ 29 ಬೈಕ್ ಗಳನ್ನು ಉಡುಗೊರೆಯಾಗಿ ನೀಡಿದೆ.
ನೌಕರರ ಶ್ರಮ ಹಾಗೂ ಬದ್ಧತೆಗೆ ಅನುಗುಣವಾಗಿ ಹುಂಡೈ, ಟಾಟಾ, ಮಾರುತಿ ಸುಜುಕಿ ಮತ್ತು ಮರ್ಸಿಡೀಸ್ ಬೆಂಜ್ ಕಾರುಗಳನ್ನು ನೀಡಿದೆ.
ಈ ಬಗ್ಗೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀಧರ್ ಕಣ್ಣನ್, ಕಂಪನಿಯ ಯಶಸ್ಸಿನಲ್ಲಿ ನೌಕರರ ಪಾಲು ಬಹುದೊಡ್ಡದಿದೆ. ಅದನ್ನು ಗುರುತಿಸುವುದು ನಮ್ಮ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ಜೀವನದಲ್ಲಿ ಕಾರು ಅಥವಾ ಬೈಕ್ ಖರೀದಿಸಬೇಕು ಎಂಬುದು ನೌಕರರ ಕನಸಾಗಿರುತ್ತದೆ. ಕಂಪನಿಯಲ್ಲಿ 180 ನೌಕರರಿದ್ದಾರೆ. ಈ ಪೈಕಿ ಉತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರೋತ್ಸಹ ನೀಡಲಾಗಿದೆ. 2022ರಲ್ಲಿ ನಾಲ್ವರು ಹಿರಿಯ ಸಹೋದ್ಯೋಗಿಗಳಿಗೆ ಕಾರನ್ನು ಉಡುಗೊರೆಯಾಗಿ ನೀಡಲಾಗಿತ್ತು. ಈ ವರ್ಷ ಕಾರು ಹಾಗೂ ಬೈಕ್ ಗಳನ್ನು ಉಡುಗೊರೆಯಾಗಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.