ನವದೆಹಲಿ: ಓಲಾ ಎಲೆಕ್ಟ್ರಿಕ್ ದ್ವಿಚಕ್ರ ಕಂಪೆನಿಯು ತನ್ನ ಎಸ್1 ಸರಣಿ ಸ್ಕೂಟರ್‌ಗಳ ಮಾರಾಟದ ಪ್ರಮಾಣವನ್ನು ಭಾರತದಲ್ಲಿ ದ್ವಿಗುಣಗೊಳಿಸುವುದಕ್ಕೆ ಮುಂದಾಗಿದ್ದು, ಅದಕ್ಕಾಗಿ ಸಾಲ ಯೋಜನೆಯನ್ನು ಪ್ರಕಟಿಸಿದೆ. ದೇಶಾದ್ಯಂತ ಓಲಾ 700ಕ್ಕೂ ಹೆಚ್ಚು ಅನುಭವ ಕೇಂದ್ರಗಳನ್ನು ಹೊಂದಿದ್ದು, ಅಲ್ಲಿ ಸಾಲದ ಸಂಬಂಧ ಹೆಚ್ಚಿನ ಮಾಹಿತಿ ಪಡೆಯಬಹುದು.
ಓಲಾ ಕಂಪೆನಿಯು, ಐಡಿಎಫ್‌ಸಿ ಫಸ್ಟ್ ಬ್ಯಾಂಕ್ ಮತ್ತು ಎಲ್ ಆ್ಯಂಡ್ ಟಿ ಫೈನಾನ್ಶಿಯಲ್ ಸರ್ವಿಸಸ್ ಸಹಭಾಗಿತ್ವದಲ್ಲಿ ತನ್ನ ನೂತನ ಎಸ್1 ಸ್ಕೂಟರ್ ಖರೀದಿಸುವ ಗ್ರಾಹಕರಿಗೆ, 60 ತಿಂಗಳವರೆಗೆ ಶೇಕಡ 6.99% ಬಡ್ಡಿ ದರದಲ್ಲಿ ಸಾಲ ಯೋಜನೆಯನ್ನು ಪ್ರಕಟಿಸಿದೆ. ಗ್ರಾಹಕರು ಡೌನ್ ಪೇಮೆಂಟ್ ಪಾವತಿಸದೇ ಓಲಾ ಸ್ಕೂಟರ್ ಕೊಂಡುಕೊಳ್ಳಬಹುದು. ಸುಲಭದ ಇಎಂಐ ಆಯ್ಕೆ ಇರುತ್ತವೆ ಎಂದು ಕಂಪೆನಿ ಹೇಳಿದೆ.
ಹೆಚ್ಚಾಗಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳ ಮೇಲೆ ಸಾಲದ ಅವಧಿ 36 ತಿಂಗಳು ಇರುತ್ತದೆ. ಕೆಲವು ಸಂದರ್ಭಗಳಲ್ಲಿ ಮಾತ್ರ 48 ತಿಂಗಳು ಇರುತ್ತವೆ. ಆದರೆ ಓಲಾ ಕಂಪೆನಿಯು ಸಾಲ ಕಟ್ಟುವ ಸಮಯವನ್ನು 60 ತಿಂಗಳಿಗೆ ವಿಸ್ತರಣೆ ಮಾಡಿದೆ.
‘ಕಂಪನಿಯ ಸ್ಕೂಟರ್ ಗಳು ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಮೊದಲ ಸ್ಥಾನದಲ್ಲಿವೆ. ನಾವು ಪ್ರಮುಖ ಹಣಕಾಸು ಸಂಸ್ಥೆಗಳೊಂದಿಗೆ ಉತ್ತಮ ಪಾಲುದಾರಿಕೆಯನ್ನು ಹೊಂದಿದ್ದು, ಇದರಿಂದ ನಮ್ಮ ಗ್ರಾಹಕರಿಗೆ ಸಾಕಷ್ಟು ಅನುಕೂಲವಾಗಲಿದೆ. ಎರಡನೇ ಹಂತದ ನಗರಗಳಲ್ಲಿ ವಹಿವಾಟು ವೃದಿಸುತ್ತದೆ’ ಎಂದು ಓಲಾದ ಚೀಫ್ ಬ್ಯುಸಿನೆಸ್ ಆಫೀಸರ್ ಅಂಕುಶ್ ಅಗರ್ವಾಲ್ ಹೇಳಿದ್ದಾರೆ.