ಬೆಂಗಳೂರು: ಹೆತ್ತ ತಾಯಿಯನ್ನೇ ಕೊಲೆ ಮಾಡಿದ್ದ ಪುತ್ರನನ್ನು ಖುಲಾಸೆಗೊಳಿಸಿ ಅಧೀನ ನ್ಯಾಯಾಲಯ ನೀಡಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದೆ. ಸಮುದಾಯ ಸೇವೆ ಮಾಡುವ ಶಿಕ್ಷೆ ವಿಧಿಸಲಾಗಿದೆ.
ಕೊಡಗು ಮೂಲದ ಆರೋಪಿ ಈಗಾಗಲೇ ಎರಡು ವರ್ಷ ಜೈಲು ಶಿಕ್ಷೆ ಅನುಭವಿಸಿದ ಹಿನ್ನೆಲೆಯಲ್ಲಿ ಆರೋಪಿಯ ಸುಧಾರಣಾ ಕ್ರಮವಾಗಿ ಆತ ಸರ್ಕಾರಿ ಶಾಲೆಯ ಆವರಣ ಸ್ವಚ್ಛಗೊಳಿಸುವುದು, ನಿರ್ವಹಣೆ ಮಾಡುವುದು, ತೋಟ ನೋಡಿಕೊಳ್ಳುವುದು ಮೊದಲಾದ ಸಮುದಾಯ ಸೇವೆ ಸಲ್ಲಿಸುವ ಶಿಕ್ಷೆಗೆ ಒಳಗಾಗುವಂತೆ ಆದೇಶ ನೀಡಲಾಗಿದೆ.
ಅಧೀನ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಡಿಕೇರಿ ಪೊಲೀಸರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಕೆ.ಎಸ್. ಮುದ್ಗಲ್ ಮತ್ತು ಟಿ.ಜಿ. ಶಿವಶಂಕರೇಗೌಡ ಅವರಿದ್ದ ಪೀಠ ಆಲಿಸಿ ಈ ಆದೇಶ ನೀಡಿದೆ.
ಆರೋಪಿ ಸಮುದಾಯ ಸೇವೆ ಮಾಡದಿದ್ದರೆ ಹೆಚ್ಚುವರಿಗಾಗಿ 25,000 ರೂ. ದಂಡ ಮತ್ತು ಮೂರು ತಿಂಗಳು ಸೆರೆವಾಸ ಅನುಭವಿಸಬೇಕು ಎಂದು ಹೈಕೋರ್ಟ್ ಆದೇಶಿಸಿದೆ. 2015ರ ಏಪ್ರಿಲ್ 4ರಂದು ದುಶ್ಚಟಗಳಿಂದ ದಾರಿ ತಪ್ಪಿದ ಮಗ ಅನಿಲ್ ಗೆ ತಾಯಿ ಗಂಗಮ್ಮ ಬೈದಿದ್ದರು. ಸಿಟ್ಟಿಗೆದ್ದ ಪುತ್ರ ದೊಣ್ಣೆಯಿಂದ ಥಳಿಸಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದ ಗಂಗಮ್ಮ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ವಿಚಾರಣಾ ನ್ಯಾಯಾಲಯ 2017ರಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿತ್ತು.