ನವದೆಹಲಿ: ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿಗೆ ಹೊಂದಿಕೊಂಡ ಹರಿಯಾಣ ಮತ್ತು ಉತ್ತರ ಪ್ರದೇಶದ ಅಂತರರಾಜ್ಯ ಗಡಿಗಳಲ್ಲಿ ರೈತರು ತೀವ್ರ ಹೋರಾಟ ಕೈಗೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಕಷ್ಟಪಟ್ಟು ದುಡಿಯುವ ರೈತರ ಕಲ್ಯಾಣಕ್ಕೆ ಬದ್ಧವಾಗಿರುವುದಾಗಿ ಹೇಳಿದ್ದಾರೆ. ‘ಮನ್ ಕಿ ಬಾತ್’ನಲ್ಲಿ ಮಾತನಾಡಿದ ಅವರು, ಭಾರತದ ಕೃಷಿ ಸಂಬಂಧಿತ ಕ್ಷೇತ್ರದಲ್ಲಿ ಹೊಸ ಆಯಾಮಗಳು ತೆರೆದುಕೊಳ್ಳುತ್ತಿವೆ. ಕೃಷಿ ಸುಧಾರಣೆಗಳಿಂದ ರೈತರಿಗೆ ಹೊಸ ಸಾಧ್ಯತೆಗಳ ಬಾಗಿಲು ತೆರೆದಿದೆ. ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಕೃಷಿ ಸುಧಾರಣೆಗೆ ಸಂಸತ್ತು ಕಾನೂನು ರೂಪವನ್ನು ನೀಡಿದ್ದು, ಈ ಸುಧಾರಣೆಗಳು ರೈತರನ್ನು ಅನೇಕ ಬಂಧನಗಳಿಂದ ಮುಕ್ತಗೊಳಿಸಿವೆ. ಮಾತ್ರವಲ್ಲದೆ, ಅವರಿಗೆ ಹೊಸ ಹಕ್ಕುಗಳನ್ನು ನೀಡಿದೆ. ಹೊಸ ಕಾನೂನುಗಳ ಸಹಾಯದಿಂದ ರೈತರಿಗೆ ಹೊಸ ಅವಕಾಶಗಳು ದೊರೆತಿವೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದ ಜಿತೇಂದ್ರ ಭೋಜಿಯವರನ್ನು ಉದಾಹರಿಸಿದ ಮೋದಿ, ಹೊಸ ಕೃಷಿ ಕಾನೂನುಗಳಿಂದ ಅವರು ಲಾಭ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ. ರೈತರಿಗೆ ಬೆಳೆ ಮಾರಾಟ ಮಾಡಿದ ಮೂರು ದಿನಗಳಲ್ಲಿ ಹಣ ನೀಡುವುದನ್ನು ಈ ಕಾನೂನುಗಳು ಖಚಿತಪಡಿಸುತ್ತವೆ. ರಾಜಸ್ಥಾನದ ಮೊಹಮ್ಮದ್ ಅಸ್ಲಾಂ, ಹರಿಯಾಣದ ಕೃಷಿಕ ವೀರೇಂದ್ರ ಯಾದವ್ ಅವರ ಹೆಸರನ್ನು ಉಲ್ಲೇಖಿಸಿದ ಮೋದಿ ಹೊಸ ಕಾನೂನುಗಳಿಂದ ಅವರಂತಹ ರೈತರಿಗೆ ಅನುಕೂಲವಾಗಿದೆ ಎಂದು ತಿಳಿಸಿದ್ದಾರೆ.
ಕೃಷಿ ಸಂಬಂಧಿತ ಕೋರ್ಸುಗಳನ್ನು ಕಲಿಯುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದ್ದಾರೆ. ಕೃಷಿ ಕಾನೂನುಗಳನ್ನು ವಿರೋಧಿಸಿ ದೆಹಲಿ ಗಡಿಭಾಗದಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿರುವ ಹೊತ್ತಲ್ಲೇ ಮೋದಿ ಇಂತಹ ಹೇಳಿಕೆ ನೀಡಿದ್ದಾರೆ.