ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಶೀಘ್ರವೇ ಚುನಾವಣೆ ನಡೆಸಲಾಗುವುದು. ರಾಜ್ಯ ಸ್ಥಾನಮಾನ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇಂದು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಮುಖಂಡರೊಂದಿಗೆ ಅವರು ಸಮಾಲೋಚನೆ ನಡೆಸಿದ್ದಾರೆ. ನವದೆಹಲಿಯ ಪ್ರಧಾನಮಂತ್ರಿ ಅಧಿಕೃತ ನಿವಾಸದಲ್ಲಿ ನಡೆದ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಸರ್ವಪಕ್ಷ ಮುಖಂಡರು ಭಾಗಿಯಾಗಿದ್ದರು.
ಸುದೀರ್ಘ ಐದು ಗಂಟೆಗಳ ಕಾಲ ನಡೆದ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಗಿದೆ. ಆಗಸ್ಟ್ 5, 2019 ರಿಂದ ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶವಾಗಿ ವಿಭಜನೆ ಮಾಡಿದ್ದು, ವಿಶೇಷ ಸ್ಥಾನಮಾನ ತೆಗೆಯಲಾಗಿದೆ. ಅದಾದ ನಂತರ, ಇದೇ ಮೊದಲ ಬಾರಿಗೆ ನಡೆದ ಮಹತ್ವದ ಸಭೆಯಲ್ಲಿ ಕಾಂಗ್ರೆಸ್ ನ ಗುಲಾಮ್ ನಬಿ ಆಜಾದ್, ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಫಾರೂಕ್ ಅಬ್ದುಲ್ಲಾ, ಒಮರ್ ಅಬ್ದುಲ್ಲಾ ಸೇರಿದಂತೆ, ಪಿಡಿಪಿಯ ಮೆಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು. ಗೃಹಸಚಿವ ಅಮಿತ್ ಶಾ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮೊದಲಾದವರು ಇದ್ದರು.
ಸಭೆಯಲ್ಲಿ ಪ್ರಧಾನಿ ಮೋದಿ ಎಲ್ಲ ನಾಯಕರಿಂದ ಸಲಹೆಗಳನ್ನು ಪಡೆದುಕೊಂಡರು. ಜಮ್ಮು ಮತ್ತು ಕಾಶ್ಮೀರಕ್ಕೆ ಶೀಘ್ರವೇ ರಾಜ್ಯದ ಸ್ಥಾನಮಾನ ನೀಡಿ ಚುನಾವಣೆಯನ್ನು ನಡೆಸುವ ಕುರಿತಾಗಿ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಸಭೆ ತೀರ್ಮಾನವನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಲಾಗಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು. ಪ್ರಜಾಪ್ರಭುತ್ವವನ್ನು ಪುನರ್ ಸ್ಥಾಪಿಸಲು ವಿಧಾನಸಭೆ ಚುನಾವಣೆ ನಡೆಸಬೇಕು. ಕಾಶ್ಮೀರಿ ಪಂಡಿತರಿಗೆ ಪುನರ್ವಸತಿ ಕಲ್ಪಿಸಬೇಕು. ಎಲ್ಲ ರಾಜಕೀಯ ನಾಯಕರನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಸಭೆಯಲ್ಲಿ ಭಾಗಿಯಾಗಿದ್ದ ನಾಯಕರು ಹೇಳಿದ್ದು, ಇದಕ್ಕೆ ಕೇಂದ್ರ ನಾಯಕರು ಒಪ್ಪಿಗೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಪುನರ್ ಸ್ಥಾಪಿಸಲು ಸರ್ವಾನುಮತದ ಸಹಕಾರದೊಂದಿಗೆ ಚುನಾವಣೆ ನಡೆಸುವ ಕುರಿತಾಗಿ ಕ್ರಮಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.