alex Certify BIG NEWS: ತಜ್ಞರು, ಸಮುದಾಯದ ನಾಯಕರೊಂದಿಗೆ ಚರ್ಚಿಸಿ ಒಳ ಮೀಸಲಾತಿ ಜಾರಿ: ಸಿಎಂ ಸಿದ್ಧರಾಮಯ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ತಜ್ಞರು, ಸಮುದಾಯದ ನಾಯಕರೊಂದಿಗೆ ಚರ್ಚಿಸಿ ಒಳ ಮೀಸಲಾತಿ ಜಾರಿ: ಸಿಎಂ ಸಿದ್ಧರಾಮಯ್ಯ

ಬೆಂಗಳೂರು: ಪರಿಶಿಷ್ಟ ಜಾತಿ ಸಮುದಾಯಕ್ಕೆ ಒಳಮೀಸಲಾತಿ ಕಲ್ಪಿಸಲು ನಾನು ಬದ್ಧನಾಗಿದ್ದು, ಇದರ ಬಗ್ಗೆ ಯಾವುದೇ ಅನುಮಾನ, ಅಪನಂಬಿಕೆ ಬೇಡ. ನಾನು ಈಗಾಗಲೇ ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಸಚಿವರಾದ  ಕೆ.ಹೆಚ್. ಮುನಿಯಪ್ಪ, ಆರ್.ಬಿ.ತಿಮ್ಮಾಪುರ್, ಮಾಜಿ ಸಚಿವ ಹೆಚ್. ಆಂಜನೇಯ ಹಾಗೂ ಮಾಜಿ ರಾಜ್ಯಸಭಾ ಸದಸ್ಯರಾದ ಎಲ್. ಹನುಮಂತಯ್ಯ ಮತ್ತು ದಲಿತ ಶಾಸಕರು ಹಾಗೂ ಮುಖಂಡರ ನಿಯೋಗ ಇಂದು ಸಿಎಂ ಭೇಟಿಯಾಗಿ ಒಳ ಮೀಸಲಾತಿ ಜಾರಿ ಸಂಬಂಧ ಚರ್ಚೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದ ಸಿಎಂ, ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಕಾನೂನು ತಜ್ಞರು ಮತ್ತು ಸಮುದಾಯದ ನಾಯಕರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳುತ್ತೇನೆ. ಒಳಮೀಸಲಾತಿಯನ್ನು ದಲಿತ ಸಮುದಾಯ ಒಮ್ಮತದಿಂದ ಒಪ್ಪಿಕೊಂಡು ಅನುಷ್ಠಾನಕ್ಕೆ ಬೆಂಬಲ ನೀಡಿರುವುದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೇಳಿದ್ದಾರೆ.

ನಾನು, ನಮ್ಮ ಪಕ್ಷ ಮತ್ತು ನಮ್ಮ ಸರ್ಕಾರಕ್ಕೆ ಸಾಮಾಜಿಕ ನ್ಯಾಯದ ಪರವಾದ ಖಚಿತ ಮತ್ತು ದೃಢ ನಿಲುವು ಇದೆ. ಇದರಲ್ಲಿ ಗೊಂದಲ ಇಲ್ಲವೇ ಇಲ್ಲ. ಮೀಸಲಾತಿಯ ಸೌಲಭ್ಯದ ನ್ಯಾಯಯುತ ಹಂಚಿಕೆಗೆ ಒಳಮೀಸಲಾತಿ ಅಗತ್ಯ ಎನ್ನುವುದು ಇತ್ತೀಚಿನ ದಿನಗಳಲ್ಲಿ ಎಲ್ಲರಿಗೂ ಅರಿವಾಗಿದೆ. ಸುಪ್ರೀಂ ಕೋರ್ಟ್ ತೀರ್ಪು ಕೂಡಾ ಇದೇ ಅಭಿಪ್ರಾಯವನ್ನು ಹೊಂದಿದೆ ಎಂದರು.

ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ಕೆನೆಪದರದ ವಿಚಾರ ಪ್ರಸ್ತಾವವಾಗಿರುವುದು ಕೆಲವರಲ್ಲಿ ಗೊಂದಲ ಉಂಟು ಮಾಡಿದೆ. ನ್ಯಾಯಾಲಯದ ತೀರ್ಪಿನ ವಿಶ್ಲೇಷಣೆಗೆ ನಾನು ಹೋಗುವುದಿಲ್ಲ. ನಾನು ಅರ್ಥಮಾಡಿಕೊಂಡಂತೆ ಒಳ ಮೀಸಲಾತಿ ಜಾರಿಗೊಳಿಸಲು ಕೆನೆಪದರದ ವಿಚಾರ ಅಡ್ಡಿಯಾಗಲಾರದು. ಕೆನೆಪದರದ ಬಗ್ಗೆ ಇಡೀ ದಲಿತ ಸಮುದಾಯದ ನಿಲುವೇ ನನ್ನ ನಿಲುವೂ ಆಗಿದೆ ಎಂದರು.

ಭಾರತೀಯ ಜನತಾ ಪಕ್ಷದ ಕೆಲವು ನಾಯಕರು ಅನಗತ್ಯವಾಗಿ ಊಹಾಪೋಹಗಳ ಮೂಲಕ ಒಳಮೀಸಲಾತಿ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಸರ್ಕಾರದ ವಿರುದ್ಧ ದಲಿತರನ್ನು ಎತ್ತಿಕಟ್ಟುವ ಕುಟಿಲ ಪ್ರಯತ್ನ ನಡೆಸುತ್ತಿದ್ದಾರೆ. ಸಾಮಾಜಿಕ ನ್ಯಾಯದ ವಿರೋಧಿಗಳಾದ ಈ ಬಿಜೆಪಿ ನಾಯಕರ ಈ ಕುಟಿಲತನವನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯ ದಲಿತ ಸಮುದಾಯಕ್ಕೆ ಇದೆ ಎಂದು ನಾನು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...