ಆನ್‌ಲೈನ್ ಶಾಪಿಂಗ್ ನಲ್ಲಿ ಭರ್ಜರಿ ರಿಯಾಯಿತಿ ಘೋಷಿಸುವುದು, ಮನೆಬಾಗಿಲಿಗೇ ತಾವು ಆರ್ಡರ್ ಮಾಡಿದ ವಸ್ತುಗಳು ಬರುವುದರಿಂದ ಬಹುತೇಕರು ಆನ್ ಲೈನ್ ನತ್ತ ಮೊರೆ ಹೋಗುತ್ತಿದ್ದಾರೆ. ಆದರೆ, ಇಂತಹ ಶಾಪಿಂಗ್ ಸೈಟ್ ನಲ್ಲಿ ಕೆಲವೊಮ್ಮೆ ನಾವು ಕೇಳಿರುವ ವಸ್ತು ಬದಲು ಬೇರೆಯೇ ಬಂದಿರುವಂತಹ ಉದಾಹರಣೆಗಳು ಅನೇಕವಿದೆ.
ಇದೀಗ ಮತ್ತದೇ ವಿಚಲಿತವಾಗುವಂತಹ ಘಟನೆ ನಡೆದಿದೆ. ಆನ್‌ಲೈನ್ ಶಾಪಿಂಗ್ ಸೈಟ್ ಮಿಂತ್ರಾದಿಂದ ಫುಟ್‌ಬಾಲ್ ಸ್ಟಾಕಿಂಗ್ಸ್ ಅನ್ನು ವ್ಯಕ್ತಿಯೊಬ್ಬ ಆರ್ಡರ್ ಮಾಡಿದ್ದಾನೆ. ಆದರೆ, ಇದರ ಬದಲಿಗೆ ಮಹಿಳೆಯರ ಒಳಉಡುಪು ಪಾರ್ಸೆಲ್ ಬಂದಿರುವುದು ನೋಡಿ ಆತ ಆಘಾತಗೊಂಡಿದ್ದಾನೆ. ಇದರ ಫೋಟೋ ಕ್ಲಿಕ್ಕಿಸಿ ಅವರು ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. @LowKashWala ತಮ್ಮ ಟ್ವಿಟ್ಟರ್ ನಲ್ಲಿ ಈ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.
ಅವರು ಫುಟ್ಬಾಲ್ ಸ್ಟಾಕಿಂಗ್ಸ್ ಅನ್ನು ಆರ್ಡರ್ ಮಾಡಿದ್ದರು. ಆದರೆ, ಅಕ್ಟೋಬರ್ 12 ರಂದು ಟ್ರಯಂಫ್ ಹೆಸರಿನ ಬ್ರಾಂಡ್ ನಿಂದ ಮಹಿಳೆಯರ ಒಳಉಡುಪು ಬಂದಿರುವುದಾಗಿ ಹೇಳಿದ್ದಾರೆ. ಇನ್ನು ಆಘಾತಕಾರಿ ಸಂಗತಿಯೆಂದರೆ ಉತ್ಪನ್ನವನ್ನು ಬದಲಿಸಲು ಕಂಪನಿಯು ನಿರಾಕರಿಸಿದೆ. “ಕ್ಷಮಿಸಿ, ಅದನ್ನು ಬದಲಾಯಿಸಲು ಸಾಧ್ಯವಿಲ್ಲ” ಎಂದು ಮಿಂತ್ರಾ ಪ್ರತಿಕ್ರಿಯಿಸಿದೆ.
ಟ್ವೀಟ್ ನಲ್ಲಿ, ಅವರು ತಮ್ಮ ದೂರು ಮತ್ತು ಮಿಂತ್ರಾದ ಪ್ರತಿಕ್ರಿಯೆಯೊಂದಿಗೆ ಅವರು ಸ್ವೀಕರಿಸಿದ ಉತ್ಪನ್ನದ ಫೋಟೋವನ್ನು ಹಂಚಿಕೊಂಡಿದ್ದಾರೆ. ಸದ್ಯ, ಇದಕ್ಕೆ ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ಈ ಪೋಸ್ಟ್ ಭಾರಿ ವೈರಲ್ ಆಗಿದೆ.