ಬೆಂಗಳೂರು: ಕಮೆಡಿಯನ್ ಮುನವರ್ ಫರೂಕಿಯ ನಂತರ ಇದೀಗ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಕುನಾಲ್ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಂಡಿದೆ.
ಸಿಲಿಕಾನ್ ಸಿಟಿಯಲ್ಲಿ ನಡೆಯಬೇಕಿದ್ದ ತಮ್ಮ ಮುಂಬರುವ ಸ್ಟ್ಯಾಂಡ್-ಅಪ್ ಕಾರ್ಯಕ್ರಮಗಳ ಸಂಘಟಕರಿಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರದ್ದುಗೊಳಿಸಲಾಗಿದೆ ಎಂದು ಕುನಾಲ್ ಕಮ್ರಾ ಬುಧವಾರ ಹೇಳಿದ್ದಾರೆ.
ಮುನ್ನಾವರ್ ಫರುಕಿ ಅವರಿಗೆ ನಗರದಲ್ಲಿ ಪ್ರದರ್ಶನ ನೀಡಲು ಅನುಮತಿ ನಿರಾಕರಿಸಿದ ಕೆಲವೇ ದಿನಗಳಲ್ಲಿ ಕಮ್ರಾ ಅವರ ಕಾರ್ಯಕ್ರಮ ರದ್ದುಗೊಳಿಸಲಾಗಿದೆ. ಈ ಹಿಂದೆ ಹಲವು ವಿಷಯಗಳಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಟೀಕಿಸಿರುವ ಕಮ್ರಾ, ನಗರದಲ್ಲಿ ನಡೆಯಲಿದ್ದ ತನ್ನ ಕಾರ್ಯಕ್ರಮಗಳನ್ನು ರದ್ದುಪಡಿಸಿರುವ ಬಗ್ಗೆ ತನ್ನ ಅನುಯಾಯಿಗಳು ಮತ್ತು ವಿರೋಧಿಗಳಿಗೆ ತಿಳಿಸಲು ಟ್ವಿಟ್ಟರ್‌ನಲ್ಲಿ ವ್ಯಂಗ್ಯಾತ್ಮಕ ಹೇಳಿಕೆಯನ್ನು ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿಗರಿಗೆ ನಮಸ್ಕಾರಗಳು. ಮುಂದಿನ 20 ದಿನಗಳಲ್ಲಿ ಬೆಂಗಳೂರಿನಲ್ಲಿ ನಡೆಯಬೇಕಿದ್ದ ನನ್ನ ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಲು ಬಹಳ ಸಂತೋಷವಾಗಿದೆ. ಎರಡು ಕಾರಣಗಳಿಗಾಗಿ ಅವುಗಳನ್ನು ರದ್ದುಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
ಆ ಎರಡು ಕಾರಣ ಏನೆಂಬುದನ್ನು ಬಹಳ ವ್ಯಂಗ್ಯವಾಗಿ ಹೇಳಿರುವ ಕುನಾಲ್, ಹೆಚ್ಚು ಕುಳಿತುಕೊಳ್ಳಬಹುದಾದ ಸ್ಥಳದಲ್ಲಿ 45 ಜನರನ್ನು ಕೂರಿಸಲು ನಾವು ವಿಶೇಷ ಅನುಮತಿಯನ್ನು ಪಡೆದಿಲ್ಲ. ಎರಡನೆಯದಾಗಿ, ಅಲ್ಲಿ ಪ್ರದರ್ಶನ ನೀಡಿದರೆ ಬೆದರಿಕೆ ಹಾಕಲಾಗಿದೆ. ಇದು ಸಹ ಕೋವಿಡ್‌ನ ಭಾಗವಾಗಿದೆ ಎಂದು ಭಾವಿಸಲಾಗುವುದು. ಕೋವಿಡ್ ಪ್ರೋಟೋಕಾಲ್ ಮತ್ತು ನೂತನ ಮಾರ್ಗಸೂಚಿಗಳನ್ನು ವೈರಸ್‌ನ ರೂಪಾಂತರದಂತೆ ನೋಡುತ್ತಿರುವುದಾಗಿ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.