ಬೆಂಗಳೂರು : ಚರ್ಚೆಗೆ ಬನ್ನಿ, ನಿಮ್ಮ ತೂ ತೂ ಮೈ ಮೈ ಹೇಳಿಕೆಗೆ ಅಂತ್ಯ ಹಾಡೋಣ ಎಂದು ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಸವಾಲ್ ಹಾಕಿದ್ದಾರೆ.
ಮೋದಿ ಅವರೇ ಆಗಾಗ ನೀವು ಸುಳ್ಳು ಸಂಗತಿಗಳನ್ನು ಪೋಣಿಸಿಕೊಂಡು ಕರ್ನಾಟಕ ಸರ್ಕಾರದ ವಿರುದ್ಧ ಆರೋಪಗಳನ್ನು ಮಾಡುತ್ತಾ ಬಂದಿದ್ದೀರಿ. ಈ “ ತೂ ತೂ ಮೈ ಮೈ..” ಚರ್ಚೆಗೆ ತಾರ್ಕಿಕವಾದ ಅಂತ್ಯ ಹಾಡಿ ಬಿಡೋಣ. ಕಳೆದ ಎರಡು ಲೋಕಸಭಾ ಚುನಾವಣೆಯ ಮುನ್ನ ನಿಮ್ಮ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದು ಸಾರ್ವಜನಿಕ ಚರ್ಚೆಯನ್ನು ಹಮ್ಮಿಕೊಳ್ಳೋಣ. ಪ್ರಣಾಳಿಕೆಯಲ್ಲಿ ನೀವು ಕೊಟ್ಟಿರುವ ಭರವಸೆಗಳಲ್ಲಿ ಎಷ್ಟನ್ನು ನೀವು ಈಡೇರಿಸಿದ್ದೀರಿ? ಎನ್ನುವುದನ್ನು ಸಾರ್ವಜನಿಕವಾಗಿಯೇ ಚರ್ಚೆ ಮಾಡೋಣ. ದೇಶದ ಪ್ರಜ್ಞಾವಂತ ಜನರೇ ಯಾರದ್ದು ಎಷ್ಟು ಸತ್ಯ? ಎಷ್ಟು ಸುಳ್ಳು? ಎನ್ನುವುದನ್ನು ತೀರ್ಮಾನಿಸಲಿ.
ಪ್ರಧಾನಿ ಮೋದಿ ಅವರೇ, ನಮ್ಮ ಸರ್ಕಾರದ ಕಡೆಗೆ ಬೆರಳು ಮಾಡುವ ಮುನ್ನ ಬಿಜೆಪಿ ಪಕ್ಷದ ವಿನಾಶಕಾರಿ ಇತಿಹಾಸದ ಮೇಲೊಮ್ಮೆ ಕಣ್ಣಾಯಿಸಿ. ನಾವು ಜನರಿಗೆ ನೀಡಿದ್ದ ಪ್ರತಿ ಭರವಸೆಯನ್ನು ಈಡೇರಿಸಿದ್ದೇವೆ – ನಮ್ಮ 5 ಗ್ಯಾರಂಟಿ ಯೋಜನೆಗಳನ್ನು ₹52,000 ಕೋಟಿಗೂ ಅಧಿಕ ಅನುದಾನದಲ್ಲಿ ಅನುಷ್ಠಾನಕ್ಕೆ ಕೊಟ್ಟಿದ್ದೇವೆ, ಇದರ ಜೊತೆಗೆ ನಾಡಿನ ಭವಿಷ್ಯ ರೂಪಿಸಲು ₹52,903 ಕೋಟಿ ಅನುದಾನ ಬಳಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ನಿಮ್ಮ ಪಕ್ಷದ ಸಾಧನೆ ಏನು? ಏಳು ಕೋಟಿ ಕನ್ನಡಿಗರ ಅಭಿವೃದ್ದಿಗಾಗಿ ವ್ಯಯವಾಗಬೇಕಾಗಿದ್ದ ಜನರ ಬೆವರ ಗಳಿಕೆಯ ತೆರಿಗೆ ಹಣವನ್ನು 40% ಕಮಿಷನ್ ರೂಪದಲ್ಲಿ ತಿಂದು ತೇಗಿದ್ದೇ? ಆದಾಯದ ಮೂಲಗಳನ್ನೆಲ್ಲ ಬರಿದು ಮಾಡಿ ರಾಜ್ಯವನ್ನು ಆರ್ಥಿಕವಾಗಿ ದಿವಾಳಿಯ ಅಂಚಿಗೆ ತಳ್ಳಿದ್ದೇ? ಈ ರೀತಿ ಲೂಟಿ ಮಾಡಿದ್ದ ಹಣದಲ್ಲಿ ನಿಮಗೂ ಪಾಲು ಸಂದಾಯವಾಗಿದೆ ಎಂದು ನಿಮ್ಮ
ಬಿಜೆಪಿಪಕ್ಷದ ನಾಯಕರೇ ಮಾಡಿರುವ ಆರೋಪ ನಿಮ್ಮ ಗಮನಕ್ಕೂ ಬಂದಿರಬಹುದಲ್ಲವೇ?ಪ್ರಧಾನಿ ನರೇಂದ್ರ ಮೋದಿಯವರೇ, ನಿಮ್ಮ ನಾಯಕರು ಲೂಟಿ ಮಾಡುತ್ತಿದ್ದ 40% ಕಮಿಷನ್ ಹಣವನ್ನು ನಾವು ನೇರವಾಗಿ ಜನರಿಗೆ ತಲುಪಿಸುತ್ತಿದ್ದೇವೆ ಎಂದಿದ್ದಾರೆ.