ಗಂಧದಗುಡಿ ಎಂದೇ ಕರೆಯಲ್ಪಡುತ್ತಿದ್ದ ಕರ್ನಾಟಕದಲ್ಲಿ ಅನೇಕ ರಾಜಮನೆತನಗಳು ಆಳ್ವಿಕೆ ನಡೆಸಿವೆ. ಅದೇ ರೀತಿ ಕದಂಬ ರಾಜ್ಯವನ್ನು ಕರ್ನಾಟಕದ ಮೊದಲ ರಾಜ್ಯವೆಂದು, ಕದಂಬರನ್ನು ಮೊದಲ ಕನ್ನಡಿಗ ರಾಜರೆಂದು ಹೇಳಲಾಗುತ್ತದೆ.
ಮಯೂರ ವರ್ಮ ಕದಂಬ ರಾಜ್ಯದ ಸಂಸ್ಥಾಪಕನಾಗಿದ್ದು, ಈತನ ರಾಜಧಾನಿ ಬನವಾಸಿಯಾಗಿತ್ತು. ಬನವಾಸಿ ಶಿರಸಿಯಿಂದ ಸೊರಬಕ್ಕೆ ಹೋಗುವ ಮಾರ್ಗಮಧ್ಯದಲ್ಲಿ ಸುಮಾರು 30 ಕಿಲೋ ಮೀಟರ್ ದೂರದಲ್ಲಿದೆ. ಅಶೋಕ ಚಕ್ರವರ್ತಿ ಬೌದ್ಧ ಧರ್ಮ ಪ್ರಸಾರಕ್ಕೆ ಕಳುಹಿಸಿದ್ದ ಬೌದ್ಧಭಿಕ್ಷು ಒಬ್ಬರು ಇಲ್ಲಿಗೆ ಭೇಟಿ ನೀಡಿದ್ದರೆಂದು ಮಹಾವಂಶ ಬೌದ್ಧಗ್ರಂಥದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೇ, ಸಿಂಹಳದ ಬೌದ್ಧಭಿಕ್ಷುಗಳು ಕೂಡ ಇಲ್ಲಿಗೆ ಭೇಟಿ ನೀಡಿದ್ದರೆನ್ನಲಾಗಿದೆ. ಗ್ರೀಕ್ ಪ್ರವಾಸಿ ಟಾಲ್ ಮಿ ಬನವಾಸಿಯನ್ನು ಬನೌಸಿ ಎಂದು ಕರೆದಿದ್ದಾನೆ.
ಹಲವು ಕವಿಗಳ ಕಾವ್ಯದಲ್ಲಿಯೂ ಬನವಾಸಿ ಹೆಸರಿಸಲಾಗಿದೆ. ಇಂತಹ ಬನವಾಸಿಯಲ್ಲಿ ಮಧುಕೇಶ್ವರ ದೇವಾಲಯ ಐತಿಹಾಸಿಕ ಸ್ಥಳವಾಗಿದ್ದು, ಇಲ್ಲಿನ ಶಿಲಾ ಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಉಮಾದೇವಿ, ನರಸಿಂಹ ಮೊದಲಾದ ದೇವತೆಗಳ ಮೂರ್ತಿಗಳಿವೆ. ಪುರಾತನ ಕೋಟೆ ಇಲ್ಲಿದ್ದು, ಜಂಬಿಟ್ಟಿಗೆಯ ಗೋಡೆ ಇವೆ. ಪ್ರತಿವರ್ಷ ಇಲ್ಲಿ ಕದಂಬೋತ್ಸವ ಅಂಗವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಅಪಾರ ಸಂಖ್ಯೆಯ ಜನ ಭೇಟಿ ಕೊಡುತ್ತಾರೆ.