
ಜರ್ಮನಿಯ ಕೊಲೋನ್‌ನಲ್ಲಿ ಪ್ರಕಟವಾದ ಅಧ್ಯಯನ ವರದಿಯೊಂದರ ಪ್ರಕಾರ, ಮೂತ್ರದ ಬಣ್ಣ, ವಾಸನೆ ಹಾಗೂ ಪ್ರಮಾಣಗಳಿಂದಾಗಿ ಸಂಬಂಧಿತ ವ್ಯಕ್ತಿ ದೇಹದಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗ್ರಹಿಸಬಹುದಾಗಿದೆ.
ಅನಾರೋಗ್ಯ ಸೂಚಿಸುವ ಮೂತ್ರದ ಸೂಚಕಗಳು
1. ಕೆಂಪು ಮೂತ್ರ :
ಮೂತ್ರದಲ್ಲಿ ರಕ್ತವಿದ್ದರೆ ಇದು ನಿಮಗೆ ಅಲಾರ್ಮ್ ಇದ್ದಂತೆ. ಮೂತ್ರನಾಳದ ಸೋಂಕಿದ್ದ ವೇಳೆ ಹೀಗೆ ಮೂತ್ರದಲ್ಲಿ ರಕ್ತ ಕಾಣುವ ಸಾಧ್ಯತೆ ಇರುತ್ತದೆ. ಕಿಡ್ನಿಯಲ್ಲಿ ಸೋಂಕು ಅಥವಾ ಕಲ್ಲುಗಳು ಕಂಡುಬಂದಾಗಲೂ ಹೀಗೇ ಆಗುತ್ತದೆ.
ಬ್ಲಾಡರ್‌ನಲ್ಲಿ ಟ್ಯೂಮರ್‌ಗಳು ಇದ್ದ ವೇಳೆ ಮೂತ್ರ ಕೆಂಪಗೆ ಬರುತ್ತದೆ. ಸತು ಅಥವಾ ಪಾದರಸದ ವಿಷವಿರುವ ಸೂಚನೆಯನ್ನೂ ಈ ಲಕ್ಷಣ ತೋರುತ್ತದೆ.
2. ನೀಲಿ-ಹಸಿರು ಮೂತ್ರ :
ಆಹಾರದಲ್ಲಿ ಹಾಕುವ ಬಣ್ಣಗಳ ಕಾರಣದಿಂದಾಗಿ ನೀಲಿ – ಹಸಿರು ಮೂತ್ರ ಬರುತ್ತದೆ. ಕೆಮೋಥೆರಪಿಯ ಕೆಲವೊಂದು ಔಷಧಗಳು ಮೂತ್ರವನ್ನು ಕಿತ್ತಳೆ ಬಣ್ಣಕ್ಕೆ ತಿರುಗಿಸುವ ಸಾಧ್ಯತೆ ಇದೆ. ಕ್ಯಾರೆಟ್‌ಗಳ ಅಧಿಕ ಸೇವನೆಯಿಂದಲೂ ಹೀಗೆ ಆಗಬಹುದು. ವಿಟಿಮಿನ್-ಸಿ, ವಿಟಮಿನ್-ಬಿಗಳಿಂದಲೂ ಮೂತ್ರಕ್ಕೆ ಬಣ್ಣ ಬರಬಹುದು. ಆದರೆ ಅದೇ ಬಣ್ಣ ಎರಡಕ್ಕಿಂತ ಹೆಚ್ಚಿನ ದಿನಗಳ ಕಾಲ ಕಂಡುಬಂದಲ್ಲಿ ಕೂಡಲೇ ವೈದ್ಯಕೀಯ ನೆರವು ಪಡೆಯುವುದು ಸೂಕ್ತ.
3. ಗಾಢ ಕಂದು ಮೂತ್ರ :
ಇದು ಸಾಮಾನ್ಯವಾಗಿ ಜಾಂಡೀಸ್‌ನ ಲಕ್ಷಣ. ಲಿವರ್, ಗಾಲ್ ಬ್ಲಾಡರ್ ಅಥವಾ ಪ್ಯಾಂಕ್ರಿಯಾಸ್‌ನಲ್ಲಿ ಏನಾದರೂ ಸೋಂಕು ಕಂಡುಬಂದಲ್ಲಿ ಹೀಗೆ ಆಗುವ ಸಂಭವ ಇರುತ್ತದೆ.
4. ಅಸ್ಪಷ್ಟ ಬಣ್ಣದ ಮೂತ್ರ :
ಮಣ್ಣು, ಮೋಡದಂಥ ಬಣ್ಣಗಳಲ್ಲಿ ಮೂತ್ರ ಕಾಣಿಸಿಕೊಂಡಾಗ ನಿಮಗೆ ಮೂತ್ರನಾಳದ ಸೋಂಕು ಆಗಿರುವ ಸಂಭವ ಇರುತ್ತದೆ. ಇದು ಮೂತ್ರ ಸಂಬಂಧಿ ಇರುವ ಅತ್ಯಂತ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ.
5. ದುರ್ವಾಸನೆಯುಕ್ತ ಮೂತ್ರ :
ಕೆಲವೊಮ್ಮೆ ಮೂತ್ರದ ದುರ್ನಾತ ವಿಪರೀತವಾಗುತ್ತದೆ. ಬೆಳ್ಳುಳ್ಳಿ ಅಥವಾ ಪ್ರಬಲವಾದ ಮಸಾಲೆ ಪದಾರ್ಥಗಳು ಅತಿಯಾದ ವೇಳೆ ಹೀಗೆ ಆಗುವ ಸಂಭವ ಇರುತ್ತದೆ. ಕೆಲವೊಮ್ಮೆ ಔಷಧಗಳ ಕಾರಣದಿಂದಲೂ ಹೀಗೆ ಆಗಬಹುದು. ಕೆಲವೊಮ್ಮೆ ಮೂತ್ರದ ಸೋಂಕಿನಿಂದಲೂ ದುರ್ವಾಸನೆ ಬರುವ ಸಾಧ್ಯತೆ ಇದೆ.
ಮೂತ್ರ ಹೊರಹಾಕುವಾಗ ನೊರೆ ರೀತಿಯ ಮೂತ್ರ ಬಂದರೆ ನಿಮ್ಮ ಮೂತ್ರದಲ್ಲಿ ಪ್ರೋಟೀನ್ ಅಧಿಕವಾಗಿ ಹೊರಹೋಗುತ್ತಿದ್ದು ಕಿಡ್ನಿ ಸಮಸ್ಯೆ ಇರುವ ಲಕ್ಷಣವಾಗುತ್ತದೆ. ಮೂತ್ರ ವಿಸರ್ಜನೆ ವೇಳೆ ನಿಮ್ಮ ಬೆನ್ನು ಹಾಗೂ ಕಿಬ್ಬೊಟ್ಟೆಯಲ್ಲಿ ನೋವು ಕಂಡರೆ ಕೂಡಲೇ ನಿಮ್ಮ ವೈದ್ಯರಿಗೆ ಈ ವಿಷಯ ತಿಳಿಸಿ.
ದೇಹದಲ್ಲಿ ಕಿಡ್ನಿಯ ಪಾತ್ರಗಳು:
* ದೇಹದಿಂದ ತ್ಯಾಜ್ಯ ಹೊರತೆಗೆಯಲು
* ಆಹಾರ ಅಥವಾ ಔಷಧಗಳ ಮೂಲಕ ದೇಹ ಸೇರಿದ ವಿಷ ಪದಾರ್ಥಗಳನ್ನು ಹೊರತೆಗೆಯಲು
* ದೇಹದ ನೀರಿನಂಶದಲ್ಲಿ ಸಮತೋಲನ ಕಾಯ್ದುಕೊಳ್ಳಲು
* ರಕ್ತದೊತ್ತಡ ನಿಯಂತ್ರಿಸುವ ಹಾರ್ಮೋನ್‌ಗಳ ಬಿಡುಗಡೆ
* ಆರೋಗ್ಯಯುತ, ಶಕ್ತಿಯುತ ಎಲುಬುಗಳಿಗಾಗಿ ಅಗತ್ಯವಾದ ವಿಟಮಿನ್ ಡಿ ಬಿಡುಗಡೆ
* ಕೆಂಪು ರಕ್ತ ಕಣಗಳ ಉತ್ಪಾದನೆ ನಿಯಂತ್ರಿಸಲು