ಚಲಿಸುತ್ತಿದ್ದ ಕಾರಿನಲ್ಲಿ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಆರೋಪದ ಮೇಲೆ ಪಶ್ಚಿಮ ತ್ರಿಪುರಾ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ.
ತನಿಖಾಧಿಕಾರಿಗಳ ಪ್ರಕಾರ ಘಟನೆ ಬೆಳಕಿಗೆ ಬಂದ ಕೂಡಲೇ ಪ್ರಮುಖ ಆರೋಪಿ ಗೌತಮ್ ಶರ್ಮಾ (26) ಮತ್ತು ವಾಹನದ ಚಾಲಕ -ಸಹ ಆರೋಪಿ ಸುದೀಪ್ ಚೆಟ್ರಿ (31) ಅವರನ್ನು ಬಂಧಿಸಲಾಯಿತು. ಮೂರನೇ ಆರೋಪಿಯನ್ನು ಮಹೇಶ್ ಕಲಾ ಪ್ರದೇಶದ ನಿವಾಸಿ ಪ್ತದೇನ್ ಜಿತ್ ಪಾಲ್ (26) ಎಂದು ಗುರುತಿಸಲಾಗಿದ್ದು, ಗುರುವಾರ ಬಂಧಿಸಲಾಗಿದೆ. ಆರೋಪಿಯೊಬ್ಬನ ಮನೆಯಿಂದ 90 ಲಕ್ಷ ರೂಪಾಯಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
”ಪ್ರಕರಣದಲ್ಲಿ ಮೂರನೇ ಆರೋಪಿಯನ್ನು ಬಂಧಿಸಿದ್ದೇವೆ. ಲಾಗ್ ಬುಕ್‌ಗಳು, ಐಪಿಎಲ್ ಬ್ಯಾಟಿಂಗ್ ಲಾಗ್‌ಗಳು ಮತ್ತು ಮನಿ ಲಾಂಡರಿಂಗ್ ಪ್ರಕರಣಗಳ ಕೆಲವು ದಾಖಲೆಗಳಂತಹ ಶಂಕಿತ ವಸ್ತುಗಳನ್ನು ಸೀಜ್ ಮಾಡಲಾಗಿದೆ. ಆತನಿಂದ ಲ್ಯಾಪ್‌ಟಾಪ್ ಮತ್ತು ಎಟಿಎಂ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಶ್ಚಿಮ ತ್ರಿಪುರಾ ಎಸ್‌ಪಿ ಕಿರಣ್ ಕುಮಾರ್ ತಿಳಿಸಿದ್ದಾರೆ.
ಜೂಜಾಟದ ಕಾಯ್ದೆಯಡಿ ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಪ್ತದೇನ್ ಜಿತ್ ಪಾಲ್‌ನ ಕೈವಾಡವಿರುವುದನ್ನು ಪ್ರಾಥಮಿಕ ಸಾಕ್ಷ್ಯಗಳು ಸಾಬೀತುಪಡಿಸುತ್ತವೆ. ಆದಾಗ್ಯೂ ನಾವು ಈ ವಿಷಯವನ್ನು ವಿವರವಾದ ರೀತಿಯಲ್ಲಿ ತನಿಖೆ ಮಾಡುತ್ತಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.
ಏತನ್ಮಧ್ಯೆ ಜಿಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.
ಘಟನೆಯ ನಂತರ ತ್ರಿಪುರಾದಲ್ಲಿ ವಿದ್ಯಾರ್ಥಿಗಳು ಮತ್ತು ಮಹಿಳಾ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಗುರುವಾರ ಪ್ರತಿಭಟನೆಗಳನ್ನು ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದವು.
ಸೋಮವಾರ ಮಧ್ಯಾಹ್ನ ಪಶ್ಚಿಮ ತ್ರಿಪುರದ ಹೊರವಲಯದಲ್ಲಿರುವ ತನ್ನ ಕಾಲೇಜಿನಿಂದ ಹಿಂತಿರುಗುತ್ತಿದ್ದಾಗ 20 ವರ್ಷದ ವಿದ್ಯಾರ್ಥಿನಿಯನ್ನು ಅಪಹರಿಸಲಾಗಿತ್ತು. ಪ್ರಕರಣದ ಪ್ರಧಾನ ಆರೋಪಿಯು ಸಂತ್ರಸ್ತೆಗೆ ಐದು ತಿಂಗಳ ಕಾಲ ಪರಿಚಿತನಾಗಿದ್ದನು. ಅವನು ಸಂತ್ರಸ್ತೆಯನ್ನು ಅವಳ ಕಾಲೇಜಿನಿಂದ ಕರೆದುಕೊಂಡು ಬಂದು ಇಬ್ಬರೂ ಪಟ್ಟಣದಲ್ಲಿ ಸುತ್ತಾಡಿದ್ದರು. ನಂತರ ತಡರಾತ್ರಿ ಆರೋಪಿ ಮತ್ತು ಅವನ ಸ್ನೇಹಿತರು ಸಂತ್ರಸ್ತೆಯ ಮನೆಯ ಸಮೀಪವಿರುವ ಶಾಲೆಯ ಮೈದಾನದಲ್ಲಿ ಅತ್ಯಾಚಾರ ಎಸಗಿ ಸ್ಥಳದಿಂದ ಪರಾರಿಯಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.