
ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ಈ ಬಾರಿ ಪದವಿಗೆ ಶುಲ್ಕ ಹೆಚ್ಚಳ ಮಾಡಿಲ್ಲ. 2021 -22 ನೇ ಸಾಲಿನ ಶುಲ್ಕವನ್ನೇ ಪ್ರಸಕ್ತ ಸಾಲಿಗೆ ಮುಂದುವರೆಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
2022 -23 ನೇ ಸಾಲಿನ ಸರ್ಕಾರಿ ಮತ್ತು ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪದವಿ ಕೋರ್ಸ್ ಗಳಿಗೆ 800 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಅರ್ಜಿ ಶುಲ್ಕ, ಪ್ರವೇಶ ಶುಲ್ಕ ಹಾಗೂ ವಿವಿಧ ಶುಲ್ಕಗಳು ಸೇರಿ ಒಟ್ಟು 800 ರೂಪಾಯಿ ಶುಲ್ಕ ನಿಗದಿ ಮಾಡಲಾಗಿದೆ.
ಇದರೊಂದಿಗೆ ನೋಂದಣಿ, ಪರೀಕ್ಷೆ, ಕ್ರೀಡಾಭಿವೃದ್ಧಿ, ಸಾಂಸ್ಕೃತಿಕ ಶುಲ್ಕವನ್ನು ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಕಾಲೇಜಿನ ಸಮಿತಿಯೇ ನಿರ್ಣಯಿಸಬೇಕು ಎಂದು ತಿಳಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ನಿಗದಿಮಾಡಿದ ಈ ಶುಲ್ಕ ಬಿಎ, ಬಿಕಾಂ, ಬಿಬಿಎ, ಬಿಬಿಎಂ, ಬಿಸಿಎ, ಕಾನೂನು ಮತ್ತು ಚಿತ್ರಕಲಾ ಕೋರ್ಸುಗಳಿಗೆ ಅನ್ವಯವಾಗಲಿದೆ ಎಂದು ಹೇಳಲಾಗಿದೆ.