ಬೆಂಗಳೂರು: ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಹೆಚ್ಚಿನ ಶುಲ್ಕ ವಸೂಲಿ ಮಾಡುವ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಕೆಲವು ಪಿಯುಸಿ ಕಾಲೇಜುಗಳಲ್ಲಿ ದುಬಾರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲ ಮಕ್ಕಳು ಉತ್ತೀರ್ಣರಾಗಿರುವುದರಿಂದ ಪಿಯುಸಿ ಕಾಲೇಜುಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೆಲವು ಕಾಲೇಜುಗಳಲ್ಲಿ ಸರ್ಕಾರ ನಿಗದಿ ಮಾಡಿದ ದರಕ್ಕಿಂತ ಹೆಚ್ಚುವರಿ ಶುಲ್ಕ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿಬಂದಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಬಿ.ಸಿ. ನಾಗೇಶ್, ಪದವಿಪೂರ್ವ ಶಿಕ್ಷಣ ಇಲಾಖೆ ನಿರ್ದೇಶಕರೊಂದಿಗೆ ಮಾತನಾಡಿದ್ದು, ಡಿಡಿಪಿಐಗಳಿಂದ ಮಾಹಿತಿ ಪಡೆದ ನಂತರ ದುಬಾರಿ ಶುಲ್ಕ ವಸೂಲಿ ಮಾಡುವ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಸರ್ಕಾರದ ಆದೇಶ ಉಲ್ಲಂಘಿಸುವ ಕಾಲೇಜುಗಳ ವಿರುದ್ಧ ಪೋಷಕರು ಗಮನಕ್ಕೆ ತಂದಿದ್ದು ಅಂತಹ ಕಾಲೇಜುಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.