ಬೆಂಗಳೂರು: 2024-25ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಕಾಲೇಜುಗಳಲ್ಲಿನ ಹೆಚ್ಚುವರಿ ಬೋಧನಾ ಕಾರ್ಯಭಾರಕ್ಕೆ ಅತಿಥಿ ಉಪನ್ಯಾಸಕರ ಸೇವೆಯನ್ನು ಬಳಸಿಕೊಳ್ಳುವ ಬಗ್ಗೆ ಕಾಲೇಜು ಶಿಕ್ಷಣ ಆಯುಕ್ತರು ಸೂಚನೆ ನೀಡಿದ್ದಾರೆ.
2024-25ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ(ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು(ಗ್ರಂಥಪಾಲಕರು ಹಾಗೂ ದೈಹಿಕ ಶಿಕ್ಷಣ ಒಳಗೊಂಡಂತೆ) ಆನ್‌ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳುವ ಸಂಬಂಧ ಉಲ್ಲೇಖ-(1) ರಂತೆ ಸರ್ಕಾರದ ನಿರ್ದೇಶನದನ್ವಯ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು.
ಆದರೆ, ಇಲಾಖೆಯಲ್ಲಿ ಖಾಯಂ ಉಪನ್ಯಾಸಕರ ಸಾಮಾನ್ಯ ಮತ್ತು ವಿಶೇಷ ವರ್ಗಾವಣೆ ಪ್ರಕ್ರಿಯೆ ನಂತರ ಅವರು ಸಂಬಂಧಪಟ್ಟ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿರುವುದರಿಂದ ಹಾಗೂ ಹೊಸದಾಗಿ ನೇಮಕಾತಿ / ಸ್ಥಳ ನಿಯುಕ್ತಿ ಹೊಂದಿದ ಉಪನ್ಯಾಸಕರು ಸಂಬಂಧಪಟ್ಟ ಕಾಲೇಜುಗಳಲ್ಲಿ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿರುವುದರಿಂದ ಕಾಲೇಜುಗಳಲ್ಲಿ ಬೋಧನಾ ಕಾರ್ಯಭಾರದ ಹೆಚ್ಚಳ/ಕೊರತೆ ಉಂಟಾಗಲಿದ್ದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ 2024-25ನೇ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆಗೆ ಆನ್‌ಲೈನ್ ಕೌನ್ಸಿಲಿಂಗ್ ನಡೆಸುವವರೆಗೆ ಈ ಹಿಂದಿನ ಶೈಕ್ಷಣಿಕ ಸಾಲಿನಲ್ಲಿ ಆಯ್ಕೆಗೊಂಡು EMIS ನಲ್ಲಿ Upload ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ / ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರ (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಕರ ಸೇವೆಯನ್ನೂ ಒಳಗೊಂಡಂತೆ) ಸೇವೆಯನ್ನು ತಾತ್ಕಾಲಿಕವಾಗಿ ಕಾಲೇಜಿನಲ್ಲಿ ಹಾಲಿ ಲಭ್ಯವಿರುವ ಕಾರ್ಯಭಾರಕ್ಕನುಗುಣವಾಗಿ ಬಳಸಿಕೊಳ್ಳುವಂತೆ ಉಲ್ಲೇಖ-(2) ರ ಈ ಕಛೇರಿಯ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು.
ಪ್ರಸ್ತುತ 1, 3 & 5 ಸೆಮಿಸ್ಟರ್ ಅವಧಿಯು ಮುಕ್ತಾಯಗೊಂಡಿರುವ / ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪುಸಕ್ತ ಸಾಲಿನ 2, 4 & 6ನೇ ಸೆಮಿಸ್ಟರ್ ಅವಧಿಗೆ ಲಭ್ಯವಿರುವ / ಲಭ್ಯವಾಗುವ ಕಾರ್ಯಭಾರದ ಮಾಹಿತಿಯನ್ನು ದಿನಾಂಕ:04.01.2025 ರ ಸಂಜೆ 5:00 ಗಂಟೆಯೊಳಗಾಗಿ ಇಲಾಖೆಯ EMIS ನಲ್ಲಿ ಕಡ್ಡಾಯವಾಗಿ Upload ಮಾಡಲು ಎಲ್ಲಾ ಪ್ರಾಂಶುಪಾಲರುಗಳಿಗೆ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
ಬೋಧನಾ ಕಾರ್ಯಭಾರದ ವಿವರಗಳನ್ನು EMIS ನಲ್ಲಿ Upload ಮಾಡುವಾಗ, ಆಯಾ ವಿಷಯಗಳಲ್ಲಿ ನಿಯಮಾನುಸಾರ ಕನಿಷ್ಠ ವಿದ್ಯಾರ್ಥಿಗಳ ಸಂಖ್ಯೆಯ ಪ್ರಮಾಣವು ಉಲ್ಲಂಘನೆಯಾಗದಂತೆ, ಸಾಮಾನ್ಯ ವರ್ಗಾವಣೆ / ವಿಶೇಷ ವರ್ಗಾವಣೆ ಮತ್ತು ಹೊಸದಾಗಿ ನೇಮಕಗೊಂಡು ಕರ್ತವ್ಯಕ್ಕೆ ಹಾಜರಾಗಿರುವ ಉಪನ್ಯಾಸಕರುಗಳಿಗೆ ನಿಯಮಾನುಸಾರ ಬೋಧನಾ ಕಾರ್ಯಭಾರವು ಹಂಚಿಕೆಯಾಗಿ, ನಂತರದಲ್ಲಿ ಉಳಿಕೆಯಾಗುವ ಕಾರ್ಯಭಾರದ ವಿವರಗಳನ್ನು ಪರಿಶೀಲಿಸಿಕೊಳ್ಳುವುದು ಸಂಬಂಧಪಟ್ಟ ಕಾಲೇಜುಗಳ ಪ್ರಾಂಶುಪಾಲರ ಜವಾಬ್ದಾರಿಯಾಗಿರುತ್ತದೆ. ಒಂದು ವೇಳೆ ಬೋಧನಾ ಕಾರ್ಯಭಾರದ ವಿವರಗಳನ್ನು ತಪ್ಪಾಗಿ Upload ಮಾಡಿದಲ್ಲಿ ಅಂತಹ ಪ್ರಾಂಶುಪಾಲರ ವಿರುದ್ಧ ನಿಯಮಾನುಸಾರ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಈ ಮೂಲಕ ಕಟ್ಟುನಿಟ್ಟಾಗಿ ಸೂಚಿಸಲಾಗಿದೆ.
2024-25ನೇ ಸಾಲಿನ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆ ಕುರಿತು ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಣೆ ಹೊರಡಿಸಲಾಗುವುದು ಎಂದು ಹೇಳಲಾಗಿದೆ.