ದಾವಣಗೆರೆ: ರಾಜ್ಯಮಟ್ಟದ ಯುವಜನೋತ್ಸವ ಅಂಗವಾಗಿ ನಗರದ ಬಾಪೂಜಿ ಎ.ಬಿ.ಎ ಮೈದಾನದಲ್ಲಿ ಭಾನುವಾರ ರಾತ್ರಿ ಆಯೋಜಿಸಲಾದ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಮ್ಯುಸಿಕಲ್ ನೈಟ್ಸ್ ಗೆ ಬೆಣ್ಣೆನಗರಿ ಜನ ಕುಣಿದು ಕುಪ್ಪಳಿಸಿದರು. ಚಳಿಯಲ್ಲೂ ಬಾಲಿವುಡ್ ಗಾಯಕಿ ಹಂಸಿಕಾ ನಾಯರ್ ಶಾರುಖಾನ್ ರಾ ಒನ್ ಚಿತ್ರದ ಚಮಕ್ ಚಲ್ಲೋ ಗೀತೆ ಹಾಡಿ ಚಳಿಯಲ್ಲೂ ಕಿಚ್ಚು ಹಚ್ಚಿದರು.
ಸಂಗೀತ ಸಂಜೆ ಕಾರ್ಯಕ್ರಮವನ್ನು ಶ್ರೇಯಾಗೋಷಾಲ್ ಕಂಠಸಿರಿಯಲ್ಲಿ ಮೂಡಿಬಂದ, ಮರಾಠಿಯ ಚಂದಾ ಗೀತೆಯನ್ನು ವಿದ್ಯಾರ್ಥಿಗಳು ಲಾವಣಿ ನೃತ್ಯದೊಂದಿಗೆ ಆರಂಭಿಸಿದರು. ಇದರೊಂದಿಗೆ ಉಪೇಂದ್ರ ಸಿನಿಮಾ ಪ್ರಸಿದ್ಧ ಗೀತೆ ಹಾಗೂ ಅಗ್ನಿಪಥ್ ಚಿತ್ರದ ಗಣೇಶ ಗೀತೆಗಳಿಗೆ ವಿದ್ಯಾರ್ಥಿಗಳು ನೃತ್ಯಮಾಡಿದರು.
ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ತಮ್ಮದೇ ಸಂಗೀತ ಸಂಯೋಜನೆ ಗೀತೆಗಳನ್ನು ತಮ್ಮ ಕಂಠಸಿರಿಯಲ್ಲಿ ಹಾಡಿದರು.
ಸರಿಗಮ 14 ನೇ ಆವೃತ್ತಿ ಸುಪ್ರಿತ್ ಪ್ರಸಿದ್ದ ಕನ್ನಡ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಬಾಲಿವುಡ್ ಖ್ಯಾತಿಯ ಗಾಯಕಿ ಹಂಸಿಕಾ ಅಯ್ಯರ್, ನಗರ ಅಧಿದೇವತೆ ದುರ್ಗಾಂಭ ದೇವಿ ಸ್ಮರಿಸುತ್ತಾ, ಆದಿಗುರು ಶಂಕರಚಾರ್ಯ ಅವರ ರಚನೆ “ಐಗಿರಿ ನಂದಿನಿ” ಗೀತೆ ಪ್ರಸ್ತುತ ಪಡಿಸಿದರು. ನಂತರ ಸವಾರಿ-2 ಚಿತ್ರದ ಪ್ರಸಿದ್ಧ ‘ಗೀತೆ ನಿನ್ನ ಧನಿಗಾಗಿ, ನಿನ್ನ ಕರೆಗಾಗಿ’ ಸುಮಧರ ಯುಗಳ ಗೀತೆಯನ್ನ ಹಂಸಿಕಾ ನಾಯರ್ ಸಹ ಕಲಾವಿದರೊಂದಿಗೆ ಹಾಡಿದರು. ಸವಾರಿ-1 ಚಿತ್ರದ ‘ಮರಳಿ ಮರೆಯಾಗಿ’ ಪುನೀತ್ ರಾಜಕುಮಾರ್ ಅಭಿನಯದ ಪೃಥ್ವಿ ಚಿತ್ರದ ‘ನಿನಗಾಗಿ’ ಹೀರೋ ಚಿತ್ರದ ಶಾಕುಂತಲ ನಕ್ಕಳು ಸೇರಿದಂತೆ ಇತರೆ ಗೀತೆಗಳನ್ನು ಸಂಗೀತ ಸಂಜೆಯಲ್ಲಿ ಹಾಡಲಾಯಿತು.
ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಸವರಾಜ ವಿ.ಶಿವಗಂಗಾ, ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಜಿ.ಎಂ, ಜಿ.ಪಂ.ಸಿಇಓ ಸುರೇಶ್ ಬಿ. ಇಟ್ನಾಳ್ ಸೇರಿದಂತೆ ಹಿರಿಯ ಅಧಿಕಾರಿಗಳು ಸಂಗೀತ ಸಂಜೆಯ ಸವಿದರು.