ಬೆಳಗೆದ್ದು ಆಕ್ಷಿ ಆಕ್ಷಿ ಎಂದು ಸೀನು ಬರುತ್ತಿದೆಯೇ? ಮೂಗಲ್ಲಿ ಸೊರಸೊರನೆ ನೀರು ಇಳಿಯುತ್ತಿದೆಯೇ? ವೈದ್ಯರ ಮಾತ್ರೆ ತಿಂದು ಸಾಕಾಗಿದೆಯೇ? ಹಾಗಾದರೆ ಇಲ್ಲಿದೆ ನೋಡಿ ಸರಳ ಸುಲಭ ಉಪಾಯ.
ಬೆಳಿಗ್ಗೆ ಎದ್ದಾಕ್ಷಣ ಚಹಾ ಕುಡಿಯುವ ಬದಲು ಗ್ರೀನ್ ಟೀ ಕುಡಿಯಿರಿ. ಅದಕ್ಕೆ ಒಂದು ಚಮಚ ಜೇನು ಸೇರಿಸಿ. ರೋಗನಿರೋಧಕ ಶಕ್ತಿ ಹೆಚ್ಚಿರುವ ಜೇನು ನೆಗಡಿ ಹೋಗಲಾಡಿಸಲು ಒಂದು ಅತ್ಯುತ್ತಮ ಮದ್ದು.
ಬೆಳಿಗ್ಗೆ ಎದ್ದಾಕ್ಷಣ ಎರಡು ಲೋಟ ಬಿಸಿನೀರು ಸೇವಿಸಿ. ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿದರೆ ಶೀತದಿಂದಾಗುವ ಮುಂದಿನ ಸಮಸ್ಯೆಗಳನ್ನೂ ಬಗೆಹರಿಸಬಹುದು. ಅಂದರೆ ಗಂಟಲು ನೋವಿಗೆ ಉಪ್ಪು ನೀರು ಹೇಳಿ ಮಾಡಿಸಿದ ಮದ್ದು.
ಕುದಿಯುವ ನೀರಿಗೆ ಜಜ್ಜಿದ ಶುಂಠಿ ಹಾಕಿ ಸೋಸಿ ಕುಡಿಯಿರಿ. ಕಷ್ಟವಾದರೆ ಒಂದು ತುಂಡು ಬೆಲ್ಲವನ್ನು ಸೇರಿಸಬಹುದು. ಕಾಳುಮೆಣಸಿನ ಪುಡಿ, ಕೊತ್ತಂಬರಿ ಪುಡಿ ಬೆರೆಸಿದ ಕಷಾಯ ತಂಪಾದ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ಶೀತ ಮೊದಲ ಹಂತದಲ್ಲಿರುವಾಗ ಇದನ್ನೆಲ್ಲಾ ಪ್ರಯತ್ನಿಸಿ. ಜ್ವರದ ಲಕ್ಷಣಗಳೂ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸುವುದೇ ಉತ್ತಮ.