ಕೋಲ್ಕತಾ: ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಜಿಲ್ಲೆಯ ನಿವಾಸಿ ಪುರ್ಬಾ ಚೌಧರಿ ಬಾಲ್ಯದಿಂದಲೂ ಹಳೆಯ ಸ್ಥಳೀಯ ಮತ್ತು ವಿದೇಶಿ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದಾರೆ.
ಅವರ ಸಂಗ್ರಹವು ಪ್ರಾಚೀನ ನಾಣ್ಯಗಳ ಶ್ರೇಣಿಯನ್ನು ಒಳಗೊಂಡಿದೆ, ಮತ್ತು ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ನಂತರದ ಹಲವು ನಾಣ್ಯಗಳನ್ನು ಒಳಗೊಂಡಿದೆ.
ಅವರ ಈ ಹವ್ಯಾಸದ ಕುರಿತು ಈಗ ಸುದ್ದಿ ವೈರಲ್ ಆಗಿದೆ. ಪುರ್ಬಾ ಚೌಧರಿಇದುವರೆಗೆ ಯಾವುದೇ ಪ್ರದರ್ಶನಗಳಲ್ಲಿ ಭಾಗವಹಿಸಿಲ್ಲವಾದರೂ, ಅವರ ಅಪರೂಪದ ನಾಣ್ಯಗಳನ್ನು ನೋಡುವ ಮೂಲಕ ಭವಿಷ್ಯದ ಪೀಳಿಗೆಯು ಇತಿಹಾಸವನ್ನು ಇಣುಕಿ ನೋಡಬಹುದಾಗಿದೆ.
ಈ ಕುರಿತು ಮಾತನಾಡಿರುವ ಅಪುರ್ಬಾ ಚೌಧರಿ, “ಬಹಳ ಹಿಂದೆ, ನನ್ನ ಚಿಕ್ಕಪ್ಪರೊಬ್ಬರು ಅಧ್ಯಯನ ಮಾಡಲು ಫ್ರಾನ್ಸ್ಗೆ ಹೋಗಿದ್ದರು. ನಂತರ ಅವರು ಕೆಲವು ಫ್ರೆಂಚ್ ನಾಣ್ಯಗಳನ್ನು ತಂದರು. ಅದರಲ್ಲಿ ಕೆಲವು ನಾಣ್ಯ ನಾನು ಪಡೆದೆ. ಈ ಘಟನೆ ಸುಮಾರು 35 ವರ್ಷಗಳ ಹಿಂದಿನದು. ಅಂದಿನಿಂದ, ಈ ನಾಣ್ಯಗಳನ್ನು ಸಂಗ್ರಹಿಸುವ ಚಟ ಪ್ರಾರಂಭವಾಯಿತು” ಎಂದಿದ್ದಾರೆ.
ಹೊಸ ನಾಣ್ಯ ಎಲ್ಲಿ ಸಿಕ್ಕರೂ ಬಿಡುವುದಿಲ್ಲ ಎನ್ನುತ್ತಾರೆ ಚೌಧರಿ. ಅವರ ಸಂಗ್ರಹಣೆಯಲ್ಲಿ ಹಲವಾರು ಸಾವಿರ ಅಪರೂಪದ ನಾಣ್ಯಗಳಿವೆ. ಭಾರತದಿಂದ ಮಾತ್ರವಲ್ಲದೆ ಅವರ ಸಂಗ್ರಹಣೆಯಲ್ಲಿ ಫ್ರಾನ್ಸ್, ಭೂತಾನ್ ಮತ್ತು ಶ್ರೀಲಂಕಾದ ನಾಣ್ಯಗಳೂ ಸೇರಿವೆ.