ಕೊಯಮತ್ತೂರು: ಸ್ಯಾನಿಟರಿ ನ್ಯಾಪ್ಕಿನ್, ಮಾಸ್ಕ್, ಹಾಲಿನ ಪ್ಯಾಕೆಟ್, ಬಿಸ್ಕತ್ ರ್ಯಾಪರ್‌ಗಳು, ಸಾಂಬಾರ್ ಸ್ಯಾಚೆಟ್‌ಗಳು, ಪಾಲಿಥಿನ್ ಬ್ಯಾಗ್‌ಗಳು ಸೇರಿದಂತೆ ಆಘಾತಕಾರಿ ಪ್ರಮಾಣದ ತ್ಯಾಜ್ಯ ವಸ್ತುಗಳು ಸಗಣಿ ರಾಶಿಯಲ್ಲಿ ಪತ್ತೆಯಾಗಿವೆ,
ಅರಣ್ಯ ಇಲಾಖೆಯ ವಿವಿಧ ಸ್ವಯಂಸೇವಕ ಚಟುವಟಿಕೆಗಳಲ್ಲಿ ತೊಡಗಿರುವ ಕೊಯಮತ್ತೂರು ವನ್ಯಜೀವಿ ಸಂರಕ್ಷಣಾ ಟ್ರಸ್ಟ್(ಸಿಡಬ್ಲ್ಯೂಸಿಟಿ) ಸದಸ್ಯರು ಕೊಯಮತ್ತೂರು ಜಿಲ್ಲೆಯ ಮಾರುತಮಲೈ ಟೆಂಪಲ್ ಹಿಲ್ ರೋಡ್‌ನಲ್ಲಿ ಇದನ್ನು ಗಮನಿಸಿದ್ದಾರೆ.
ಸಿಡಬ್ಲ್ಯುಸಿಟಿ ಅಧ್ಯಕ್ಷ ಮುರುಗಾನಂದಂ ತಿರುಗನಸಂಬಂಧಂ ಮತ್ತು ಇತರ ಸದಸ್ಯರು ಸಗಣಿ ರಾಶಿಯಿಂದ ತ್ಯಾಜ್ಯ ವಸ್ತುಗಳನ್ನು ಹೊರತೆಗೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆನೆ ಕಾರಿಡಾರ್ ಬಳಿ ತ್ಯಾಜ್ಯ ಸುರಿದವರನ್ನು ತರಾಟೆಗೆ ತೆಗೆದುಕೊಂಡಿದ್ದು, ಅಗತ್ಯ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಮುರುಗಾನಂದಂ, ಐದು ಆನೆಗಳ ಹಿಂಡು ಮರುತಮಲೈ ಹಿಲ್ ರೋಡ್‌ನಲ್ಲಿ ಕಾಣಿಸಿಕೊಂಡಿವೆ. ಸಗಣಿ ರಾಶಿಯನ್ನು ಪರಿಶೀಲಿಸಿದಾಗ 300 ಗ್ರಾಂ ಪ್ಲಾಸ್ಟಿಕ್ ತ್ಯಾಜ್ಯ ಪತ್ತೆಯಾಗಿದೆ. ಬಿಟ್ಟ ಸಗಣಿ ಒಂದೇ ಆನೆಯದ್ದಾಗಿರಬಹುದು. ಈ ಹಿಂದೆಯೂ ನಾವು ಸಗಣಿ ರಾಶಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಕಂಡಿದ್ದೇವೆ. ಆದರೆ ಇದರಲ್ಲಿ ಮಾಸ್ಕ್ ಗಳು ಮತ್ತು ಸ್ಯಾನಿಟರಿ ನ್ಯಾಪ್ ಕಿನ್‌ಗಳನ್ನು ನೋಡಿ ಆಘಾತಕ್ಕೊಳಗಾಗಿದ್ದೇವೆ ಎಂದು ಅವರು ಹೇಳಿದ್ದಾರೆ.
ಅವರ ಪ್ರಕಾರ, ಸೋಮೈಯಂಪಾಳ್ಯಂ ಪಂಚಾಯಿತಿಯಿಂದ ಸಂಗ್ರಹಿಸಲಾದ ತ್ಯಾಜ್ಯವನ್ನು ದೇವಾಲಯದ ಅಡಿವಾರಂ ಬಳಿಯ ಕಸದ ರಾಶಿಗೆ ಸುರಿಯಲಾಗುತ್ತದೆ, ಈ ಪ್ರದೇಶ ಆನೆಗಳು, ಕಾಡುಹಂದಿಗಳು, ಗೋವುಗಳು ಮತ್ತು ಜಿಂಕೆಗಳು ಸೇರಿದಂತೆ ಪ್ರಾಣಿಗಳು ಆಹಾರ ಹುಡುಕಲು ಬರುವ ಸ್ಥಳವಾಗಿದೆ. ಇಂತಹ ತ್ಯಾಜ್ಯಗಳು ಪ್ರಾಣಿಗಳಿಗೆ ಮಾರಣಾಂತಿಕ ಹಾನಿಯನ್ನುಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.
ನಾವು ಡಂಪ್ ಯಾರ್ಡ್ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲಿಸಿದ್ದೇವೆ. ಆದರೆ, ಹೆಚ್ಚಿನ ಕ್ರಮ ಸಾಧ್ಯವಾಗಿಲ್ಲ. ವಾಸ್ತವವಾಗಿ, ಡಂಪ್ ಯಾರ್ಡ್‌ನಿಂದ ಬರುವ ದುರ್ವಾಸನೆಯಿಂದ ದೇವಾಲಯಕ್ಕೆ ಭೇಟಿ ನೀಡುವವರಿಗೆ ತೊಂದರೆಯಾಗುತ್ತಿದೆ. ಅರಣ್ಯ ಇಲಾಖೆಯಿಂದಲೂ ನೋಟಿಸ್ ಜಾರಿ ಮಾಡಲಾಗಿದೆ. ಪುರಾವೆಗಳ ಹೊರತಾಗಿಯೂ, ಅಂತಹ ಯಾವುದೇ ಘಟನೆ ನಡೆಯುತ್ತಿಲ್ಲ ಎಂದು ಪಂಚಾಯತ್ ಹೇಳುತ್ತದೆ. ಪ್ರತಿ ಬಾರಿ ಡಂಪ್ ಯಾರ್ಡ್‌ನಲ್ಲಿ ಆನೆಗಳು ಜಮಾಯಿಸುವ ಬಗ್ಗೆ ಮಾಹಿತಿ ಪಡೆದಾಗ, ನಮ್ಮ ತಂಡವು ಸ್ಥಳಕ್ಕೆ ಭೇಟಿ ನೀಡಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತಿನ್ನುವುದನ್ನು ತಡೆಯಲು ಹಿಂಡುಗಳನ್ನು ಚದುರಿಸುತ್ತದೆ. ಕೊಯಮತ್ತೂರು ಜಿಲ್ಲಾ ಅರಣ್ಯಾಧಿಕಾರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದು, ಕೆಲವು ಕ್ರಮಗಳನ್ನು ಕೈಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದ್ದಾರೆ.
https://youtu.be/gP0L-AAtDE0