ಹಣ, ಅಧಿಕಾರ ಕೈಗೆ ಸಿಕ್ಕರೆ ಸಾಕು, ಮನುಷ್ಯ ಅಸಹಾಯಕರನ್ನ ಪ್ರಾಣಿಗಳಿಗಿಂತ ಕೀಳಾಗಿ ನೋಡುತ್ತಾನೆ. ಅಂಥಹ ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತೆ. ಇದು ಸೋಶಿಯಲ್ ಮೀಡಿಯಾ ಜಮಾನಾ ಆಗಿದ್ದರಿಂದ ಇಂತಹ ವೀಡಿಯೋಗಳು ಆಗಾಗ ವೈರಲ್ ಆಗ್ತಾನೇ ಇರುತ್ತೆ. ಇತ್ತೀಚೆಗೆ ಅಂತಹ ಮತ್ತೊಂದು ಘಟನೆ ವೈರಲ್ ಆಗಿದೆ. ಈ ಘಟನೆ ನಡೆದಿದ್ದು ತಮಿಳುನಾಡಿನ ಕೊಯಮತ್ತೂರಿನಲ್ಲಿ.
ಅದು ತಮಿಳುನಾಡಿನ ಕೊಯಮತ್ತೂರಿನ ಪ್ರಸಿದ್ಧ ಅವಿನಾಶಿ ರಸ್ತೆ. ಇಲ್ಲಿ ವಾಹನಗಳ ಓಡಾಟ ನಿರಂತರವಾಗಿರುತ್ತೆ. ಅದೇ ರಸ್ತೆಯಲ್ಲಿ ಫುಡ್ ಡಿಲಿವರಿ ಬಾಯ್ ಸಹಜವಾಗಿ ತನ್ನ ದ್ವಿಚಕ್ರವಾಹನದ ಮೇಲೆ ಹೋಗುತ್ತಿದ್ದ. ಅದೇ ರಸ್ತೆಯಲ್ಲಿದ್ದ ಟ್ರಾಫಿಕ್ ಪೊಲೀಸ್‌ಗೆ ಅದೇನು ಆಯ್ತೋ ಏನೋ ಆ ಡಿಲಿವರಿ ಬಾಯ್ ಕೆನ್ನೆಗೆ ಎರಡು ಬಾರಿಸಿದ್ದಾನೆ. ಪೊಲೀಸ್ ನಡೆದುಕೊಂಡ ಅಮಾನವೀಯ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
38 ವರ್ಷದ ಮೋಹನಸುಂದರಂ ಟ್ರಾಫಿಕ್ ಪೊಲೀಸ್‌ನಿಂದ ಹಲ್ಲೆಗೆ ಒಳಗಾದ ವ್ಯಕ್ತಿ. ಇವರು ಸ್ವಿಗ್ಗಿ ಸಂಸ್ಥೆಯಲ್ಲಿ ಕಳೆದ 2ವರ್ಷದಿಂದ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದರು. ಮೋಹನ್ ಸುಂದರಂ ಎಂದಿನಂತೆ ಈ ರಸ್ತೆಯಲ್ಲಿ ಫುಡ್ ಡಿಲಿವರಿಗೆ ಅಂತ ಬರುತ್ತಿದ್ಧಾಗ ಅದೇ ರಸ್ತೆಯಲ್ಲಿ ಖಾಸಗಿ ಶಾಲಾ ಬಸ್ ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ವಾಹನ ಓಡಿಸುತ್ತಿದ್ದನ್ನ ಗಮನಿಸಿದ್ದಾರೆ. ಇದರಿಂದ ಅಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು.
ಚಾಲಕನ ನಿರ್ಲಕ್ಷ್ಯದಿಂದ ಅಸಮಾಧಾನಗೊಂಡ ಮೋಹನಸುಂದರಂ ಆತನನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ಸಮಯದಲ್ಲಿ ಅಲ್ಲಿ ಟ್ರಾಫಿಕ್‌ಜಾಮ್ ಆಗಿದೆ. ಆಗ ಅಲ್ಲೇ ಡ್ಯೂಟಿಯಲ್ಲಿ ಇದ್ದ ಟ್ರಾಫಿಕ್ ಪೊಲೀಸ್ ಸತೀಶ್ ಬಂದು ಅಲ್ಲಿ ಏನು ಸಮಸ್ಯೆ ಅಂತ ವಿಚಾರಿಸಿದ್ದಾರೆ. ಮೋಹನಸುಂದರಂ ಅವರಿಗೆ ಪೊಲೀಸ್ ಸಿಬ್ಬಂದಿ ನಿಂದಿಸಿದರು, ಜೊತೆಗೆ ಅವರ ಮಾತು ಏನು ಅಂತ ಕೇಳದೆಯೇ ಅಲ್ಲೇ ಅವರ ಕೆನ್ನೆಗೆ ಎರಡು ಬಾರಿಸಿದ್ದಾರೆ. ಕೊನೆಗೆ ಅವರ ಮೊಬೈಲ್ ಫೋನ್ ಕಸಿದುಕೊಂಡು ಹೋಗಿದ್ದಾರೆ. ಇದೆಲ್ಲವನ್ನೂ ಅಲ್ಲೇ ಇದ್ದ ವ್ಯಕ್ತಿ ಮೊಬೈಲ್ನಲ್ಲಿ ರೆಕಾರ್ಡ್ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮೋಹನಸುಂದರಂ ಅವರು ಸಿಟಿಪೊಲೀಸ್ ಆಯುಕ್ತರ ಕಚೇರಿಗೆ ಹೋಗಿ ಸತೀಶ್ ಅವರ ವಿರುದ್ಧ ದೂರನ್ನ ಕೊಟ್ಟಿದ್ದಾರೆ. ಈಗ ಸತೀಶ್ ಅವರನ್ನ ಕಂಟ್ರೋಲ್ ರೂಮ್‌ಗೆ ವರ್ಗಾವಣೆ ಮಾಡಲಾಗಿದೆ.