
ಕೊಯಮತ್ತೂರು: ತನ್ನ ಮಾಜಿ ಗೆಳತಿಯ ಮಾರ್ಫ್ ಮಾಡಿದ ಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಪ್ರಸಾರ ಮಾಡಿದ ಆರೋಪದ ಮೇಲೆ ಕೇರಳ ಮೂಲದ ರಾಷ್ಟ್ರೀಯ ಮಟ್ಟದ ಬೈಕ್ ರೇಸರ್ ಆಲ್ಡ್ರಿನ್ ಬಾಬು(24)ನನ್ನು ಕೊಯಮತ್ತೂರು ನಗರದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಕೇರಳದ ತ್ರಿಶೂರ್ ಜಿಲ್ಲೆಯ ಬಾಬು ಕೆಲವು ಸಮಯದಿಂದ ಸಂಬಂಧ ಹೊಂದಿದ್ದ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಧಿಸಲಾಯಿತು.
ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದ ಸುಮಾರು ಎರಡು ವರ್ಷಗಳ ಹಿಂದೆ ಅವರೊಂದಿಗಿನ ಸಂಬಂಧವನ್ನು ಕಡಿದುಕೊಂಡಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ. ಆದರೆ ಕೆಲವು ವಾರಗಳ ಹಿಂದೆ, ತನ್ನ ಹೆಸರಿನಲ್ಲಿ ತೆರೆಯಲಾದ ನಕಲಿ ಇನ್‌ಸ್ಟಾಗ್ರಾಮ್ ಖಾತೆಯಿಂದ ತನ್ನ ಅಶ್ಲೀಲ ಚಿತ್ರಗಳನ್ನು ಮಾರ್ಫ್ ಮಾಡಿರುವುದನ್ನು ಅವಳು ನೋಡಿದ್ದಳು. ಇದರ ಬೆನ್ನಲ್ಲೇ ಆಕೆ ಅಕ್ಟೋಬರ್‌ನಲ್ಲಿ ಸೈಬರ್ ಕ್ರೈಂ ಪೊಲೀಸರನ್ನು ಸಂಪರ್ಕಿಸಿದ್ದಳು. ನಂತರ, ಪೊಲೀಸರು ಆತನ ಐಪಿ ವಿಳಾಸವನ್ನು ಬಳಸಿಕೊಂಡು ಆತನನ್ನು ಪತ್ತೆಹಚ್ಚಿದರು ಮತ್ತು ತನಿಖೆಯಿಂದ ಆಕೆಯ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಮ್ ಖಾತೆಯನ್ನು ರಚಿಸಿ ಅಶ್ಲೀಲ ಚಿತ್ರಗಳನ್ನು ಅಪ್‌ಲೋಡ್ ಮಾಡಿದ್ದು ಆಲ್ಡ್ರಿನ್ ಬಾಬು ಎಂದು ತಿಳಿದುಬಂದಿದೆ.
ಆಲ್ಡ್ರಿನ್ ಬಾಬು ತನ್ನ ಸಂಬಂಧವನ್ನು ಮುಂದುವರಿಸಲು ಒತ್ತಾಯಿಸಿದ ಎಂದು ಸಂತ್ರಸ್ತೆ ಹೇಳಿದ್ದಾಳೆ, ಆದರೆ ಅವಳು ನಿರಾಕರಿಸಿದ್ದಳು. ಅದಕ್ಕಾಗಿಯೇ ಅವನು ತನ್ನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೀಗೆ ಮಾಡಿದ್ದಾನೆ ಎಂದು ಹೇಳಿದ್ದಾಳೆ.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 43 (i) 66 ಮತ್ತು 67 (ಎ) ಮತ್ತು ತಮಿಳುನಾಡು ಮಹಿಳೆಯರ ಕಿರುಕುಳ ನಿಷೇಧ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಸೈಬರ್ ಕ್ರೈಮ್ ಪೊಲೀಸರು ಬಾಬುನನ್ನು ಬಂಧಿಸಿದ್ದಾರೆ. ಆತನನ್ನು ಕೊಯಮತ್ತೂರು ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ಆರೋಪಿ ಇಂಡಿಯನ್ ನ್ಯಾಷನಲ್ ಮೋಟಾರ್ ಸೈಕಲ್ ರೇಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುತ್ತಿದ್ದ. ಬಂಧನದ ನಂತರ, ಬಾಬು ಜಾಮೀನಿಗಾಗಿ ಕೊಯಮತ್ತೂರು ನ್ಯಾಯಾಲಯ ಸಂಪರ್ಕಿಸಿದ್ದ. ಆದರೆ ನ್ಯಾಯಾಲಯವು ಜಾಮೀನು ಅರ್ಜಿ ತಿರಸ್ಕರಿಸಿದೆ.