ಕೊಯಮತ್ತೂರಿನ ಹೊರಭಾಗದಲ್ಲಿರುವ ಮಧುಕ್ಕರೈ ಬಳಿ ಶಸ್ರ್ಡಸಜ್ಜಿತ ಗ್ಯಾಂಗ್ ವೊಂದು ಕೇರಳದ ಉದ್ಯಮಿಯ ಕಾರ್ ಮೇಲೆ ದಾಳಿ ನಡೆಸಿ ಹಲ್ಲೆಗೆ ಮುಂದಾದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದೆ. ಹೆದ್ದಾರಿಯಲ್ಲಿ ರಾತ್ರಿ ವೇಳೆ ತಂಡದ ದಾಳಿ ಬೆಚ್ಚಿಬೀಳಿಸಿದೆ.
ಕೇರಳದ ಉದ್ಯಮಿ ಎಂ. ಅಸ್ಲಾಂ ಸಿದ್ದಿಕ್ (28) ಮತ್ತು ಅವರ ಮೂವರು ಉದ್ಯೋಗಿಗಳು ಬೆಂಗಳೂರಿನಿಂದ ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದಾಗ ಈ ಭಯಾನಕ ಅನುಭವವಾಗಿದೆ. ಮೂರು ಕಾರುಗಳಲ್ಲಿ ನಾಲ್ಕು ಜನರಿದ್ದ ಗ್ಯಾಂಗ್, ಸೇಲಂ-ಕೊಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಿದ್ದಿಕ್ ಅವರ ಕಾರನ್ನು ಹಠಾತ್ ಓವರ್ ಟೇಕ್ ಮಾಡಿದ್ದಾರೆ.
ಸಿದ್ದಿಕ್ ಕಾರ್ ನಿಲ್ಲಿಸುವಂತೆ ಒತ್ತಾಯಿಸಿ ಸ್ಟೀಲ್ ರಾಡ್ ಗಳಿಂದ ಕಾರಿಗೆ ಡಿಕ್ಕಿ ಹೊಡೆದು ವಿಂಡ್ ಶೀಲ್ಡ್ ಒಡೆಯಲು ಯತ್ನಿಸಿದರು. ಬೇಗನೆ ಯೋಚಿಸಿದ ಸಿದ್ದಿಕ್ ತಪ್ಪಿಸಿಕೊಳ್ಳಲು ಕಾರನ್ನು ರಿವರ್ಸ್ ತೆಗೆದುಕೊಂಡು ದಾಳಿಕೋರರ ಕಾರ್ ಗುದ್ದಿಕೊಂಡು ಮುಂದೆ ಹೋದರು. ದಾಳಿಕೋರರನ್ನು ಹಿಮ್ಮೆಟ್ಟಿಸಿ ಹತ್ತಿರದ ಟೋಲ್ ಪ್ಲಾಜಾದ ಕಡೆಗೆ ವೇಗವಾಗಿ ಚಾಲನೆ ಮಾಡಿದರು. ಘಟನೆಯು ಕಾರ್ ನಲ್ಲಿದ್ದ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ದಾಳಿಯ ವೇಳೆ ವಿಚಲಿತರಾಗದೇ ಧೈರ್ಯವಾಗಿ ಎದುರಿಸಿದ ಸಿದ್ದಿಕ್ ಅವರ ಜಾಣ್ಮೆಯ ನಡೆಯನ್ನು ಇಂಟರ್ನೆಟ್ ಬಳಕೆದಾರರು ಹೊಗಳಿದ್ದಾರೆ. ಆತ್ಮರಕ್ಷಣೆಗಾಗಿ ಕಾರನ್ನು ಬಳಸಿದ ರೀತಿ ಇತರರಿಗೆ ಪಾಠ ಎಂದು ಹಲವರು ಹೇಳಿದ್ದಾರೆ.
ಎರ್ನಾಕುಲಂನ ಸಿದ್ದಿಕ್ ಕೊಚ್ಚಿಯಲ್ಲಿ ಜಾಹೀರಾತು ಸಂಸ್ಥೆಯನ್ನು ನಡೆಸುತ್ತಿದ್ದಾರೆ. ಅವರು ಮತ್ತು ಅವರ ಉದ್ಯೋಗಿಗಳಾದ ಚಾರ್ಲ್ಸ್, ನಿತಿನ್ ಮತ್ತು ಅಜೀಶ್ ಎರಡು ದಿನಗಳ ಹಿಂದೆ ಕಂಪ್ಯೂಟರ್ ಖರೀದಿಸಲು ಬೆಂಗಳೂರಿಗೆ ತೆರಳಿದ್ದರು. ಬೆಳಗಿನ ಜಾವ 2:30ರ ಸುಮಾರಿಗೆ ಸೇಲಂ-ಕೊಚ್ಚಿ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಎಲ್ ಆ್ಯಂಡ್ ಟಿ ಟೋಲ್ ಪ್ಲಾಜಾ ಬಳಿ ಬಂದಾಗ ಗುಂಪು ದಾಳಿ ನಡೆಸಿತು.
ಮುಸುಕುಧಾರಿ ದುಷ್ಕರ್ಮಿಗಳು ವಾಹನವನ್ನು ಸುತ್ತುವರೆದು ವಿಂಡ್ ಶೀಲ್ಡ್ ಅನ್ನು ಒಡೆದು ಹಾಕಲು ಪ್ರಾರಂಭಿಸಿದರು. ಸಿದ್ದಿಕ್ ಕಾರ್ ಟೋಲ್ ಪ್ಲಾಜಾ ಕಡೆ ಹೋಗ್ತಿದ್ದಂತೆ ತಮ್ಮ ಮೇಲಿನ ಕಣ್ಗಾವಲು ಮತ್ತು ಸಾರ್ವಜನಿಕರ ಉಪಸ್ಥಿತಿಯಿಂದಾಗಿ ಗ್ಯಾಂಗ್ ಹಿಂದಿರುಗಿತು. ಸಿದ್ದಿಕ್ ಕಾರನ್ನು ನಿಲ್ಲಿಸಿ ಬೆಳಿಗ್ಗೆ ಮಧುಕ್ಕರೈ ಪೊಲೀಸರಿಗೆ ದೂರು ನೀಡಿದ್ದಾರೆ. ದೊಡ್ಡ ಮೊತ್ತದ ನಗದನ್ನು ಕೊಂಡೊಯ್ಯುತ್ತಿದ್ದಾರೆ ಎಂದು ಶಂಕಿಸಿ ಗ್ಯಾಂಗ್ ಸಿದ್ದಿಕ್ ಅವರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿದೆ. ಪೊಲೀಸ್ ಅಧಿಕಾರಿಗಳು ಘಟನೆಯ ತನಿಖೆಗಾಗಿ ತಂಡವನ್ನು ರಚಿಸಿದ್ದಾರೆ.