ಬೆಂಗಳೂರು: ಎಳನೀರು ದರ ಬಲು ದುಬಾರಿಯಾಗಿದೆ. ಕೆಲವು ಕಡೆ 40, 45, 50 ರೂ.ವರೆಗೆ ಮಾರಾಟವಾಗುತ್ತಿದೆ. ಹೆಚ್ಚಿನವರು ಆರೋಗ್ಯದ ಉತ್ತಮ ಪಾನಿಯ ಎಂದು ಎಳನೀರು ಕುಡಿಯುತ್ತಾರೆ. ಬೇಡಿಕೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಳಿಗಾಲದಲ್ಲಿಯೂ ಎಳನೀರಿನ ಬೆಲೆ ದುಬಾರಿಯಾಗಿದೆ.
ಬಸ್ ನಿಲ್ದಾಣ, ಆಸ್ಪತ್ರೆ ಸೇರಿ ಜನನಿಬಿಡ ಪ್ರದೇಶಗಳಲ್ಲಿ ಎಳನೀರು ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಬೆಂಗಳೂರು ನಗರಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು ಜಿಲ್ಲೆಗಳ ಕಡೆಯಿಂದ ಎಳನೀರು ಮಾರಾಟಕ್ಕೆ ಬರುತ್ತದೆ.
ಕೆಲವು ಕಡೆ ಎಳನೀರು ದರ 50 ರೂ.ವರೆಗೂ ಇದೆ. ಕಳೆದ ವರ್ಷ ಇದೇ ಅವಧಿಯಲ್ಲಿ 30, 35 ರೂಪಾಯಿ ದರ ಇತ್ತು. ಬೊಮ್ಮನಹಳ್ಳಿಯಲ್ಲಿ ಎಳನೀರು ಮಾರಾಟ ಮಂಡಿ ಇರುವುದರಿಂದ ಆ ಪ್ರದೇಶದಲ್ಲಿ 20 ರೂಪಾಯಿಗೆ ಎಳನೀರು ಮಾರಾಟ ಮಾಡಲಾಗುತ್ತಿದೆ. ಬೆಳೆಗಾರರಿಗೆ ಕಡಿಮೆ ಬೆಲೆ ಸಿಗುತ್ತಿದ್ದು, ಮಧ್ಯವರ್ತಿಗಳಿಗೆ ಹೆಚ್ಚಿನ ಲಾಭವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.