ಕೊಬ್ಬರಿ ಎಣ್ಣೆ ಅತ್ಯಂತ ಆರೋಗ್ಯಕರವಾಗಿದ್ದು, ಪುಟ್ಟ ಮಕ್ಕಳಿಂದ ಹಿರಿಯರವರೆಗೆ ಎಲ್ಲಾ ವಯಸ್ಸಿನವರೂ ಯಾವುದೇ ಆತಂಕವಿಲ್ಲದೆ ಉಪಯೋಗಿಸಬಹುದಾದ ಬಹುಪಯೋಗಿ ಎಣ್ಣೆಯಾಗಿದೆ.
ಪುಟ್ಟ ಮಕ್ಕಳಿಗೂ, ನವಜಾತ ಶಿಶುಗಳಿಗೂ ಕೊಬ್ಬರಿ ಎಣ್ಣೆ ಸೂಕ್ತವಾಗಿದ್ದು, ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೂರಕವಾಗಿದೆ. ದೇಹದ ಆರೋಗ್ಯ, ಅದರಲ್ಲೂ ಕೂದಲು ಮತ್ತು ಚರ್ಮದ ಆರೈಕೆಯಲ್ಲಿ ಇದರ ಪಾತ್ರ ಮಹತ್ವದ್ದಾಗಿದೆ.
ಕೊಬ್ಬರಿ ಎಣ್ಣೆಯಲ್ಲಿ ಸಮೃದ್ಧವಾಗಿರುವ ಪೋಷಕಾಂಶ, ಲಾರಿಕ್ ಆಮ್ಲದಿಂದ ಯಾವುದೇ ರೀತಿಯ ತುರಿಕೆ ಉಂಟಾಗುವುದಿಲ್ಲ. ಹಾಗೂ ಚರ್ಮದ ಆರೋಗ್ಯಕ್ಕೂ ಒಳ್ಳೆಯದು. ಹಿರಿಯರಿಗೆ ಅಭ್ಯಂಜನಕ್ಕೆ ಕೊಬ್ಬರಿ ಎಣ್ಣೆ ಹೇಗೆ ಸೂಕ್ತವೋ ಹಾಗೆಯೇ ಚಿಕ್ಕಮಕ್ಕಳಿಗೂ ಕೊಬ್ಬರಿ ಎಣ್ಣೆ ಉತ್ತಮವಾಗಿದೆ.
ಸಾಮಾನ್ಯವಾಗಿ ಮಕ್ಕಳ ಚರ್ಮದ ತೈಲ ಗ್ರಂಥಿಗಳು ಹೆಚ್ಚು ಕ್ರಿಯಾಶೀಲವಾಗಿದ್ದು, ಸೂಕ್ಷ್ಮ ಗೀರುಗಳಿಗೆ ಸುಲಭವಾಗಿ ತುತ್ತಾಗುವ ಸಾಧ್ಯತೆಗಳಿರುತ್ತವೆ. ಇದರಿಂದ ಚರ್ಮ ಕೆಂಪಾಗುವುದು, ತುರಿಕೆ ಮುಂತಾದ ಸಮಸ್ಯೆಗಳೂ ಎದುರಾಗುತ್ತವೆ. ಅವುಗಳ ನಿವಾರಣೆಗೆ ಕೊಬ್ಬರಿ ಎಣ್ಣೆ ಸಹಕಾರಿಯಾಗಲಿದೆ.
ಲಾರಿಕ್ ಆಮ್ಲ ಎಂಬ ಪೋಷಕಾಂಶ, ತಾಯಿ ಹಾಲಿನಲ್ಲೂ ಹೇರಳವಾಗಿದ್ದು, ಮಗುವಿನ ಪೋಷಣೆಗೆ ಹೆಚ್ಚು ಸಹಕಾರಿಯಾಗಿದೆ. ಆದ್ದರಿಂದ ಗರ್ಭಿಣಿಯರು ಹಾಗೂ ಮಗುವಿಗೆ ಹಾಲುಣಿಸುತ್ತಿರುವ ತಾಯಂದಿರು ತಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಕೊಬ್ಬರಿ ಎಣ್ಣೆ ಇರುವಂತೆ ನೋಡಿಕೊಳ್ಳುವುದು ಒಳ್ಳೆಯದು.
ಕೊಬ್ಬರಿ ಎಣ್ಣೆಯಲ್ಲಿರುವ ಲಾರಿಕ್ ಆಮ್ಲದಿಂದ ತಾಯಿ ಹಾಲು ವೃದ್ಧಿಯಾಗುವುದರ ಜೊತೆಗೆ ತಾಯಿಯಾಗುವವರ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೊಬ್ಬು ಸಂಗ್ರಹ ಮತ್ತು ಹೆಚ್ಚು ಹಾಲು ಉತ್ಪತ್ತಿಯಾಗಲು ನೆರವಾಗುತ್ತದೆ. ಇದರ ಪರಿಣಾಮವಾಗಿ ಮಗುವಿನ ಆರೋಗ್ಯ ಉತ್ತಮ ಸ್ಥಿತಿಯಲ್ಲಿರುತ್ತದೆ.
ಕೊಬ್ಬರಿ ಎಣ್ಣೆಯಲ್ಲಿರುವ ಟ್ರೈ ಗ್ಲಿಸ್‌ರೈಡ್ ಎಂಬ ಅಂಶ ಮಗುವಿನ ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. ಇದರಿಂದಾಗಿ ಮಗುವಿನ ಆರೋಗ್ಯ ಉತ್ತಮಗೊಂಡು, ದಿನೇ ದಿನೇ ವಿವಿಧ ಆಹಾರಗಳನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಕೊಬ್ಬರಿ ಎಣ್ಣೆ ಉತ್ತಮ ತೇವಕಾರಕವಾಗಿದ್ದು, ಮಕ್ಕಳ ಕೋಮಲ ಚರ್ಮಕ್ಕೂ ಸೂಕ್ತ. ಚಿಕ್ಕವಯಸ್ಸಿನಿಂದಲೇ ನಿಯಮಿತವಾಗಿ ಕೊಬ್ಬರಿ ಎಣ್ಣೆಯಿಂದ ಮಸಾಜ್ ಮಾಡುವ ಮೂಲಕ ಮಕ್ಕಳ ಚರ್ಮವನ್ನು ಸೋಂಕುಗಳಿಂದ ರಕ್ಷಿಸಬಹುದು. ಮಕ್ಕಳ ಸುಖನಿದ್ರೆಗೂ ಕೊಬ್ಬರಿ ಎಣ್ಣೆ ನೆರವಾಗಲಿದೆ. ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೂ ಇದು ಸಹಕಾರಿ. ಮಕ್ಕಳ ಮೂಳೆಗಳನ್ನು ಸದೃಢವಾಗಿಸುತ್ತದೆ. ಕೇವಲ ಮಕ್ಕಳಿಗೆ ಅಷ್ಟೇ ಅಲ್ಲದೇ ಕೊಬ್ಬರಿ ಎಣ್ಣೆಯನ್ನು ಎಲ್ಲರೂ ಬಳಕೆ ಮಾಡಬಹುದಾಗಿದೆ.