ಯಾವುದೇ ರೀತಿಯ ವ್ಯಸನವು ಆರೋಗ್ಯಕ್ಕೆ ಹಾನಿಕರ. ಇದು ಆರೋಗ್ಯವನ್ನು ಹಾಳುಮಾಡುವುದಲ್ಲದೆ, ವ್ಯಕ್ತಿಯನ್ನು ಮತ್ತು ಅವರ ಕುಟುಂಬವನ್ನು ದುಃಖ, ಖಿನ್ನತೆ ಮತ್ತು ಚಿಂತೆಯ ಸುಳಿಯಲ್ಲಿ ಸಿಲುಕಿಸುತ್ತದೆ. ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟ. 38 ವರ್ಷದ ಮಹಿಳೆಯೊಬ್ಬರು ಕೊಕೇನ್ ವ್ಯಸನಕ್ಕೆ ಬಲಿಯಾಗಿ ಮೂಗಿಗೆ ಹಾನಿ ಮಾಡಿಕೊಂಡು ಮುಖದಲ್ಲಿ ರಂಧ್ರವನ್ನು ಹೊಂದಿದ್ದಾರೆ.
ಚಿಕಾಗೊ, ಇಲಿನಾಯ್ಸ್‌ನಲ್ಲಿ ವಾಸಿಸುವ ಕೆಲ್ಲಿ ಕೊಜಿರಾ ಅವರ ಕಥೆ ಇದು. 2017ರಲ್ಲಿ, ಕೆಲ್ಲಿ ಒಂದು ರಾತ್ರಿ ಸ್ನೇಹಿತರೊಂದಿಗೆ ಪಾರ್ಟಿಗೆ ಹೋಗಿದ್ದು, ಆಕೆಯ ಸ್ನೇಹಿತರಲ್ಲಿ ಒಬ್ಬರು ಕೊಕೇನ್ ನೀಡಿದ್ದರು. ಕೆಲವೇ ತಿಂಗಳುಗಳಲ್ಲಿ, ಆಕೆ ವ್ಯಸನಿಯಾಗಿ ಮಾರ್ಪಟ್ಟಿದ್ದು, ಪ್ರತಿದಿನ ಕೊಕೇನ್ ತೆಗೆದುಕೊಳ್ಳುತ್ತಿದ್ದಳು. ನಿದ್ದೆ ಮತ್ತು ಆಹಾರವನ್ನು ಸಹ ನಿರ್ಲಕ್ಷಿಸಿದ್ದು, ಕೇವಲ 19 ತಿಂಗಳಲ್ಲಿ, ಕೆಲ್ಲಿ ತನ್ನ ವ್ಯಸನಕ್ಕಾಗಿ 70 ಲಕ್ಷ ರೂ. ಖರ್ಚು ಮಾಡಿದ್ದಾರೆ.
ಕೆಲ ತಿಂಗಳುಗಳ ನಂತರ, ಆಕೆಯ ಮೂಗಿನಲ್ಲಿ ರಕ್ತಸ್ರಾವವಾಗಲು ಪ್ರಾರಂಭಿಸಿತು. ಮುಖದಲ್ಲಿ ರಂಧ್ರವು ರೂಪುಗೊಂಡಿತು, ರಕ್ತದೊಂದಿಗೆ ಮಾಂಸದ ತುಂಡುಗಳು ಮೂಗಿನಿಂದ ಹೊರಬರಲು ಪ್ರಾರಂಭಿಸಿದಾಗ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತು. ಈ ಹಾನಿ ತನ್ನಿಂದ ತಾನೇ ಗುಣವಾಗುತ್ತದೆ ಎಂದು ಆಕೆ ಭಾವಿಸಿದ್ದರು. ಆದಾಗ್ಯೂ, ಆಕೆಯ ಮೂಗು ತೀವ್ರವಾಗಿ ಹಾನಿಗೊಳಗಾಯಿತು, ಮುಖದಲ್ಲಿ ರಂಧ್ರ ಉಂಟಾಯಿತು. ಆಕೆಯ ಕುಟುಂಬ ಮಧ್ಯಪ್ರವೇಶಿಸಿದಾಗ, 2021 ರಲ್ಲಿ ಆಕೆ ಸಂಪೂರ್ಣವಾಗಿ ಮಾದಕ ದ್ರವ್ಯಗಳನ್ನು ಬಳಸುವುದನ್ನು ನಿಲ್ಲಿಸಲು ನಿರ್ಧರಿಸಿದಳು. ಅಂದಿನಿಂದ, ಮೂಗನ್ನು ಪುನರ್ನಿರ್ಮಾಣ ಮಾಡಲು 15 ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾರೆ.
ಒಂದು ಶಸ್ತ್ರಚಿಕಿತ್ಸೆಯಲ್ಲಿ, ಆಕೆಯ ಹಣೆಯ ಬಳಿಯ ಚರ್ಮವನ್ನು ಬಳಸಿ ಮೂಗಿನ ತುದಿಯನ್ನು ಪುನರ್ನಿರ್ಮಿಸಲಾಯಿತು. ಮೂಗಿನಲ್ಲಿರುವ ಅಪಧಮನಿಯನ್ನು ಬದಲಿಸಲು ಆಕೆಯ ತೋಳಿನಿಂದ ಅಪಧಮನಿಯನ್ನು ತೆಗೆದುಕೊಳ್ಳಲಾಯಿತು, ಇದರಿಂದ ರಕ್ತವು ಆಕೆಯ ಕೆನ್ನೆಯ ಮೂಲಕ ಹರಿಯಲು ಸಾಧ್ಯವಾಯಿತು. ನಿಧಾನವಾಗಿ, ಆಕೆಯ ಮೂಗು ಚೇತರಿಸಿಕೊಳ್ಳುತ್ತಿದೆ. ಕೆಲ್ಲಿ ಈಗ ತನ್ನ ಅನುಭವಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಇತರರು ಮಾದಕ ದ್ರವ್ಯಗಳನ್ನು ತೆಗೆದುಕೊಳ್ಳುವುದನ್ನು ತಡೆಯಲು ಬಯಸುತ್ತಾರೆ.