ಬೆಂಗಳೂರು: ನೈರುತ್ಯ ಮುಂಗಾರು ಮಳೆ ಚುರುಕುಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಮಳೆ ಆರ್ಭಟ ಮುಂದುವರೆದಿದೆ.
ರಾಜ್ಯದಲ್ಲಿ ಇನ್ನೆರಡು ದಿನ ಮಳೆ ಮುಂದುವರೆಯಲಿದೆ. ಇನ್ನೂ ಮೂರು ದಿನಗಳ ಕಾಲ ಕರಾವಳಿ ಜಿಲ್ಲೆಯಲ್ಲಿ ಭಾರಿ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಪಶ್ಚಿಮ ಘಟ್ಟ ಪ್ರದೇಶದ ಜಿಲ್ಲೆಗಳಲ್ಲಿಯೂ ಮೂರು ದಿನಗಳ ಕಾಲ ಹೆಚ್ಚಿನ ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಉತ್ತರ ಒಳನಾಡಿನಲ್ಲಿ ಎರಡು ದಿನ ಉತ್ತಮ ಮಳೆ ಆಗಲಿದೆ. ದಕ್ಷಿಣ ಒಳನಾಡಿನ ಹಲವೆಡೆ ನಾಲ್ಕು ದಿನ ಮಳೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮಳೆಯಿಂದಾಗಿ ನದಿಗಳು ತುಂಬಿ ಹರಿಯುತ್ತಿವೆ. ಕಾವೇರಿ, ಲಕ್ಷ್ಮಣತೀರ್ಥ, ಪಯಸ್ವಿನಿ, ಅಟ್ಟಿಹೊಳೆ, ಕೀರೆಹೊಳೆ, ತ್ರಿವೇಣಿ ಸಂಗಮ, ಹಾರಂಗಿ ಡ್ಯಾಮ್ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಪ್ರವಾಹ ಎದುರಾಗುವ ಭೀತಿಯಲ್ಲಿ ನದಿ ಪಾತ್ರದ ಜನರಿದ್ದಾರೆ.
ಹಾರಂಗಿ ಜಲಾಶಯಕ್ಕೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು, ಯಾವುದೇ ಕ್ಷಣದಲ್ಲಿ ನೀರನ್ನು ಹೊರ ಬಿಡಬಹುದಾಗಿದೆ. ತಗ್ಗು ಪ್ರದೇಶದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಜಿಲ್ಲಾಡಳಿತ ಮುನ್ನೆಚ್ಚರಿಕೆ ನೀಡಿದೆ.
ಕರಾವಳಿಯಲ್ಲಿ ಹೆಚ್ಚಿನ ಮಳೆಯಾಗಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡಿದ್ದು, ಅನೇಕ ಕಡೆಗಳಲ್ಲಿ ಕಡಲ್ಕೊರೆತದ ಭೀತಿ ಎದುರಾಗಿದೆ.